ಮುಂಬೈ(ಮಹಾರಾಷ್ಟ್ರ): ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಮತ್ತು ವಿಡಿಯೋಕಾನ್ ಗ್ರೂಪ್ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಕಳೆದ ಶುಕ್ರವಾರ ಕೇಂದ್ರೀಯ ತನಿಖಾ ದಳ ಕೊಚ್ಚಾರ್ಗಳನ್ನು ಬಂಧಿಸಿತ್ತು. ಧೂತ್ ಅವರನ್ನು ಸೋಮವಾರ ಬಂಧಿಸಲಾಗಿತ್ತು. ಮೂವರನ್ನು ಗುರುವಾರ ಅವರ ಹಿಂದಿನ ಬಂಧನದ ಕೊನೆಯಲ್ಲಿ ವಿಶೇಷ ನ್ಯಾಯಾಧೀಶ ಎಸ್ ಎಚ್ ಗ್ವಾಲಾನಿ ಅವರ ಮುಂದೆ ಹಾಜರುಪಡಿಸಲಾಯಿತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎ ಲಿಮೋಸಿನ್ ಸಿಬಿಐ ಪರ ವಾದ ಮಂಡಿಸಿದರು. ವಾದ ಆಲಿಸಿದ ನಂತರ ನ್ಯಾಯಾಲಯವು ಎಲ್ಲ ಮೂವರು ಆರೋಪಿಗಳನ್ನು ಜನವರಿ 10, 2023 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.
2019ರಲ್ಲಿ ದಾಖಲಾದ ತನ್ನ ಎಫ್‌ಐಆರ್‌ನಲ್ಲಿ ಸಿಬಿಐ, ಚಂದಾ ಕೊಚ್ಚಾರ್ ಮತ್ತು ಧೂತ್ ಜೊತೆಗೆ ದೀಪಕ್ ಕೊಚ್ಚಾರ್ ನಿರ್ವಹಿಸುತ್ತಿದ್ದ ಎನ್‌ಆರ್‌ಎಲ್ , ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಟೆಡ್ಎಸ್ಇಪಿಎಲ್, ವಿಡಿಯೋಕಾನ್ ಇಂಟರ್ ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ -ವಿಐಎಲ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಆರೋಪಿಗಳೆಂದು ಹೆಸರಿಸಿತ್ತು. ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಆರ್‌ಬಿಐ ಮಾರ್ಗಸೂಚಿಗಳು ಮತ್ತು ಬ್ಯಾಂಕಿನ ಸಾಲ ನೀತಿಯನ್ನು ಉಲ್ಲಂಘಿಸಿ ಧೂತ್ ಅವರಿಂದ ಪ್ರವರ್ತಿಸಲ್ಪಟ್ಟ ವಿಡಿಯೋಕಾನ್ ಗ್ರೂಪ್‌ನ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಎಂದು ಸಿಬಿಐ ಆರೋಪಿಸಿದೆ.
2009 ರಲ್ಲಿ ಚಂದಾ ಕೊಚ್ಚಾರ್ ನೇತೃತ್ವದ ಮಂಜೂರಾತಿ ಸಮಿತಿಯು ಸಾರ್ವಜನಿಕ ಸೇವೆಯಲ್ಲಿದ್ದರೂ ತಮ್ಮ ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಬ್ಯಾಂಕ್‌ನ ನಿಯಮಗಳು ಮತ್ತು ನೀತಿಗಳಿಗೆ ವಿರುದ್ಧವಾಗಿ VIEL ಗೆ 300 ಕೋಟಿ ರೂಪಾಯಿಗಳ ಅವಧಿ ಸಾಲವನ್ನು ಅನುಮೋದಿಸಿತ್ತು ಎಂದು ಸಿಬಿಐ ಆರೋಪಿಸಿತ್ತು.
ಇದನ್ನು ಓದಿ: 80 ಲಕ್ಷ ನಕಲಿ ನೋಟು ಚಲಾವಣೆಗೆ ಯತ್ನ; ಆರೋಪಿ ವಶಕ್ಕೆ ಪಡೆದ ಮುಂಬೈ ಅಪರಾಧ ದಳ