ಮಲಪ್ಪುರಂ(ಕೇರಳ): ತನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಕಾಮತೃಷೆಗೆ ಬಳಸಿಕೊಂಡ ಪಾಪಿ ತಂದೆಯೊಬ್ಬನ ಅಮಾನವೀಯ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ಮಂಜೇರಿ ಪೊಕ್ಸೊ ವಿಶೇಷ ನ್ಯಾಯಾಲಯ ಡಬಲ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿದೆ. ಜೊತೆಗೆ 3 ಲಕ್ಷ ದಂಡ ಕಟ್ಟುವಂತೆ ಸೂಚಿಸಿದೆ.
55 ವರ್ಷದ ವ್ಯಕ್ತಿಯ ವಿರುದ್ಧದ ಎರಡು ಪ್ರಕರಣಗಳಲ್ಲಿ ಮೊದಲನೆಯ ಪ್ರಕರಣದ ತೀರ್ಪನ್ನು ಮಂಜೇರಿಯ ತ್ವರಿತಗತಿ ವಿಶೇಷ ನ್ಯಾಯಾಲಯ ಪ್ರಕಟಿಸಿತು. ಭಾರತೀಯ ದಂಡ ಸಂಹಿತೆ 376, 511 (ಅತ್ಯಾಚಾರ ಯತ್ನ), 254 (ಮಹಿಳೆಯ ಮೇಲೆ ದೌರ್ಜನ್ಯ), 506 (2) (ಕ್ರಿಮಿನಲ್ ಬೆದರಿಕೆ) ಹಾಗೂ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 75ರ ಅಡಿಯಲ್ಲಿ ಮತ್ತೊಂದು ಪ್ರಕರಣದಲ್ಲಿ ಅಪರಾಧಿಗೆ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ.. ಮಾಜಿ ಶಾಸಕನಿಗೆ 25 ವರ್ಷ ಶಿಕ್ಷೆ ವಿಧಿಸಿದ ಕೋರ್ಟ್
2014-2016ರ ನಡುವೆ ಪತ್ನಿಯೊಂದಿಗೆ ಜಗಳವಾಡಿದ ನಂತರ ಅಪರಾಧಿ ತನ್ನಿಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದಾಗ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಆರೋಪ ಕೇಳಿಬಂದಿತ್ತು. ಮಕ್ಕಳು ತಮ್ಮ ತಾಯಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. 2016ರ ಮಾರ್ಚ್‌ನಲ್ಲಿ, 15 ಮತ್ತು 17 ವರ್ಷ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಷಯ ತಿಳಿದ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಏನಿದು ಡಬಲ್ ಜೀವಾವಧಿ ಶಿಕ್ಷೆ?
ಸಿಆರ್‌ಪಿಸಿ ಸೆಕ್ಷನ್ 433-ಎ ಪ್ರಕಾರ, ಆರೋಪಿ ತಪ್ಪು ಮಾಡಿರುವುದು ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಸಾಬೀತಾದರೆ ಡಬಲ್ ಜೀವಾವಧಿ ಶಿಕ್ಷೆ ನೀಡಲಾಗುತ್ತದೆ. ಯಾವ ಪ್ರಕರಣದಲ್ಲಿ ಹೆಚ್ಚು ಅವಧಿಯ ಶಿಕ್ಷೆ ವಿಧಿಸಲಾಗುತ್ತದೆಯೋ ಆ ಶಿಕ್ಷೆಯನ್ನು ಆತ ಪೂರೈಸಬೇಕಾಗುತ್ತದೆ. ಕನಿಷ್ಠ 14 ವರ್ಷ ಜೀವಾವಧಿ ಶಿಕ್ಷೆ ಅನುಭವಿಸಬೇಕಾಗುತ್ತದೆ.