ಪಣಜಿ (ಗೋವಾ): 2013ರ ಅತ್ಯಾಚಾರ ಪ್ರಕರಣದಲ್ಲಿ ಪತ್ರಕರ್ತ ತರುಣ್ ತೇಜ್‌ಪಾಲ್ ಅವರನ್ನು ಗೋವಾದ ಮಾಪುಸಾ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿದ್ದು, ನಿರ್ದೋಷಿಯೆಂದು ಘೋಷಿಸಿದೆ.
ತೆಹಲ್ಕಾ' ಮ್ಯಾಗಜಿನ್ನ ಸ್ಥಾಪಕ ಮತ್ತು ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್‌ಪಾಲ್ ಅವರು ತಮ್ಮ ಕಿರಿಯ ಸಹೋದ್ಯೋಗಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಎದುರಿಸುತ್ತಿದ್ದರು. ಈ ಎಲ್ಲಾ ಆರೋಪಗಳಿಂದ ತೇಜ್ಪಾಲ್ರನ್ನು ಕೋರ್ಟ್ ಮುಕ್ತಗೊಳಿಸಿದೆ.
ಪ್ರಕರಣ ಹಿನ್ನೆಲೆ
ಗೋವಾದ ಪಂಚತಾರಾ ರೆಸಾರ್ಟ್‌ನಲ್ಲಿ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತೇಜ್ಪಾಲ್ರನ್ನು 2013ರ ನವೆಂಬರ್ 30 ರಂದು ಬಂಧಿಸಲಾಗಿತ್ತು. ಸೆಪ್ಟೆಂಬರ್ 29, 2017 ರಂದು ನ್ಯಾಯಾಲಯವು ಪಾಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಿತ್ತು. ಇದರ ವಿರುದ್ಧ ಪತ್ರಕರ್ತ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ಆಗಸ್ಟ್ನಲ್ಲಿ ಆರೋಪಗಳನ್ನು ರದ್ದುಗೊಳಿಸಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯ, ಆರು ತಿಂಗಳೊಳಗೆ ವಿಚಾರಣೆಯನ್ನು ಮುಕ್ತಾಯಗೊಳಿಸಲು ನಿರ್ದೇಶಿಸಿತ್ತು.