ಇಂದೋರ್ (ಮಧ್ಯಪ್ರದೇಶ): ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 4,500 ಲೀಟರ್ ವಿಷಕಾರಿ ಮದ್ಯವನ್ನು ಮಧ್ಯಪ್ರದೇಶದ ಇಂದೋರ್ ಪೊಲೀಸರು ವಶಪಡಿಸಿಕೊಂಡಿದ್ದು, ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ.
ಜಿತೇಂದ್ರ, ಭಾರತ್, ಮತ್ತು ಬಂತಿ ಬಂಧಿತ ಆರೋಪಿಗಳಾಗಿದ್ದಾರೆ. ನಿಖರ ಮಾಹಿತಿ ಮೇರೆಗೆ ಇಂದೋರ್ನ ಖುದೈಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಂಜಾರಿ ಗ್ರಾಮದಲ್ಲಿನ ಅರಣ್ಯ ಪ್ರದೇಶದಲ್ಲಿ ಮದ್ಯ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ದಾಳಿ ನಡೆಸಲಾಗಿದೆ. 22 ಡ್ರಮ್‌ಗಳಲ್ಲಿ ಸುಮಾರು 4,500 ಲೀಟರ್ ಮದ್ಯವನ್ನು ತಯಾರಿಸಲಾಗುತ್ತಿತ್ತು. ಐವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಂಟ್ರಿ ಸಾರಾಯಿ ಸೇವನೆ: ಸಾವಿನ ಸಂಖ್ಯೆ 55ಕ್ಕೆ ಏರಿಕೆ, 17 ಜನರ ಸ್ಥಿತಿ ಗಂಭೀರ
ಮದ್ಯದಲ್ಲಿ ಯೂರಿಯಾ ಬೆರೆಸಲಾಗಿದ್ದು, ಇದರಿಂದ ಅದು ವಿಷಪೂರಿತವಾಗಿದೆ. ಇದು ಅನೇಕ ಜನರ ಸಾವಿಗೆ ಕಾರಣವಾಗಿರಬಹುದು. ಪೊಲೀಸರ ತ್ವರಿತ ಕ್ರಮದಿಂದಾಗಿ ಮಾರುಕಟ್ಟೆಯನ್ನು ತಲುಪುವ ಮೊದಲೇ ಪತ್ತೆ ಮಾಡಲಾಗಿದೆ ಎಂದು ಗೆಹ್ಲೋಟ್ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಅಲಿಗಢದಲ್ಲಿ ವಿಷಪೂರಿತ ಮದ್ಯ ಸೇವಿಸಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.