ಬೆಂಗಳೂರು: ಹುಟ್ಟುಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಭಾವನನ್ನೇ ಬಾಮೈದ ಹಾಗೂ ಆತನ ಚಿಕ್ಕಪ್ಪ ಸೇರಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ನಡೆದಿದೆ.
ಚೇತನ್ ಕೊಲೆಯಾದ ದುದೈರ್ವಿಯಾಗಿದ್ದು ಕೊಲೆಯಾದ ಚೇತನ್ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದ ನಿವಾಸಿಯಾಗಿದ್ದು, ಲಗ್ಗೆರೆಯ ಎಲ್.ಜಿ. ಬಡಾವಣೆಯಲ್ಲಿ ವಾಸವಾಗಿದ್ದನು.
ಚೇತನ್ ಒಬ್ಬ ಯುವತಿಯನ್ನು ಪ್ರೀತಿಸುತ್ತಿದ್ದು, ಯುವತಿಯ ಮನೆಯಲ್ಲಿ ತಗಾದೆ ಉಂಟಾದ ಕಾರಣದಿಂದ, ತಾವೇ ಕುಟುಂಬದ ವಿರೋಧ ಕಟ್ಟಿಕೊಂಡು, ಮದುವೆಯಾಗಿ ಲಗ್ಗರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕೆಲ ದಿನಗಳ ಹಿಂದಷ್ಟೇ ಹುಡುಗಿ ಮನೆಯವರು ಮಾತುಕತೆ ನಡೆಸಿ ಹುಡುಗನೊಂದಿಗೆ ರಾಜಿ ಸಂಧಾನ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಇದರಂತೆ ಯುವತಿಯ ಸಹೋದರ ಆಕಾಶ್, ಚಿಕ್ಕಪ್ಪ ನಂಜೇಶ್, ಮತ್ತೊಬ್ಬ ವ್ಯಕ್ತಿ ದೀಪಕ್ ಎಂಬುವವರು ಚೇತನ್ ಹುಟ್ಟುಹಬ್ಬದ ಶುಭಾಶಯ ಕೋರಲು ಲಗ್ಗೆರೆಯಲ್ಲಿರುವ ಮನೆಗೆ ಬಂದಿದ್ದಾರೆ.
ಭೂಮಿಕಾಳನ್ನ ಪುಸಲಾಯಿಸಿ ಮನೆ ಹೊರಗೆ ಕಳುಹಿಸಿದ ಆರೋಪಿಗಳು ಬಳಿಕ ಮಾರಕಾಸ್ತ್ರಗಳಿಂದ ಚೇತನ್ನನ್ನು ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಸ್ಥಳೀಯರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದು, ಆರೋಪಿಗಳನ್ನು ಬಂಧಿಸುವುದಾಗಿ ನಗರ ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
ಚೇತನ್ನನ್ನು ಮದುವೆಯಾಗುವ ಮೊದಲು ಯುವತಿಗೆ ಬೇರೊಬ್ಬರೊಂದಿಗೆ ಮದುವೆ ಮಾಡಲಾಗಿತ್ತು. ಮದುವೆ ಇಷ್ಟ ಇಲ್ಲದ ಕಾರಣದಿಂದ ಗಂಡನನ್ನು ತೊರೆದ ಯುವತಿ ಪ್ರಿಯಕರ ಚೇತನ್ನನ್ನು ಮರು ವಿವಾಹವಾಗಿದ್ದಳು ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ಕೊಲೆಯಾದ ಚೇತನ್ ಕುಟುಂಬಸ್ಥರು ಠಾಣೆಯ ಮುಂಭಾಗ ಬಂದು ಯುವತಿಯ ಕುಟುಂಬಸ್ಥರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದೊಂದು ಮರ್ಯಾದಾ ಹತ್ಯೆ ಎಂಬ ಅನುಮಾನಗಳೂ ಕಾಡುತ್ತಿವೆ.