ಉಜ್ಜಯಿನಿ (ಮಧ್ಯಪ್ರದೇಶ): ಕಳ್ಳತನ ಆರೋಪದ ಮೇಲೆ ಯುವಕನೊಬ್ಬನಿಗೆ ಅಮಾನುಷವಾಗಿ ಥಳಿಸಿದ ಘಟನೆ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ನಡೆದಿದೆ. ಕೈಕಾಲುಗಳನ್ನು ಕಟ್ಟಿ ಬೋರಿಂಗ್ ಲಿಫ್ಟರ್ ಯಂತ್ರಕ್ಕೆ ತಲೆಕೆಳಗಾಗಿ ನೇತುಹಾಕಿ ಯುವಕನ ಮೇಲೆ ಹಲ್ಲೆ ಮಾಡಲಾಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬದ್‌ನಗರ ತಾಲೂಕಿನ ಸಿಜಾವತಾ ಗ್ರಾಮದಲ್ಲಿ 10 ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಯಂತ್ರಕ್ಕೆ ತಲೆಕೆಳಗಾಗಿ ನೇತುಹಾಕಿ ಯುವಕನಿಗೆ ದೊಣ್ಣೆಗಳಿಂದ ಬರ್ಬರವಾಗಿ ಥಳಿಸಲಾಗಿದೆ. ಅರ್ಜುನ ಎಂಬಾತನೇ ಈ ರೀತಿ ಹಲ್ಲೆ ಮಾಡಿದ ಆರೋಪಿ ಎಂದು ಹೇಳಲಾಗಿದೆ.
ಈ ಅಮಾನುಷ ಹಲ್ಲೆಯಿಂದ ಗಾಬರಿಗೊಂಡು ಸಂತ್ರಸ್ತ ಯುವಕ ಗ್ರಾಮ ತೊರೆದು ಓಡಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನ.4ರಂದೇ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ, ಇದುವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ವಿಡಿಯೋ ವೈರಲ್ ಆದ ನಂತರ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗೋರಿಯಾ ಪೊಲೀಸ್ ಠಾಣೆಯ ಪ್ರಭಾರಿ ಪೃಥ್ವಿ ಸಿಂಗ್ ಖಲಾಟೆ, ಈ ಹಲ್ಲೆಗೆ ಸಂಬಂಧಿಸಿದಂತೆ ಅರ್ಜುನ್ ಮೊಂಗಿಯಾ ಮತ್ತು ಸಂಜಯ್ ಜಾಟ್ ಎಂಬುವವರಿಂದ ದೂರು ಸಲ್ಲಿಕೆಯಾಗಿದೆ. ಇದು ಇನ್ನೂ ತನಿಖೆ ಹಂತದಲ್ಲಿದೆ. ಆದರೆ, ಹಲ್ಲೆಯ ವಿಡಿಯೋ ನನ್ನ ಗಮನಕ್ಕೆ ಬಂದಿಲ್ಲ. ತನಿಖೆ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಡು ರಸ್ತೆಯಲ್ಲೇ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿ, ಅಮಾನುಷ ಹಲ್ಲೆ: ಪ್ರಾಧ್ಯಾಪಕ ಅರೆಸ್ಟ್