ಮಂಗಳೂರು: 22 ವರ್ಷದ ಹಿಂದೆ ಅನ್ಯಕೋಮಿನ ಯುವಕನನ್ನು ಮದುವೆಯಾಗಿದ್ದ ಯುವತಿಯ ಕುಟುಂಬದವರು ಆಕೆಯ ಮಗಳ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಇತ್ತೀಚೆಗೆ ಬರ್ಕೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 21 ವರ್ಷದ ಯುವತಿಯೊಬ್ಬಳು ನಿಶ್ಚಿತಾರ್ಥವಾದ ಬಳಿಕ ಚಿನ್ನಾಭರಣದೊಂದಿಗೆ ನಾಪತ್ತೆಯಾದ ಪ್ರಕರಣ ವರದಿಯಾಗಿತ್ತು. ಈ ಮದುವೆ ನಿಶ್ಚಯಿಸಲಾಗಿದ್ದ ಯುವಕನ ಕಡೆಯವರು ನೀಡಿದ ಚಿನ್ನಾಭರಣ ಮತ್ತು 90 ಸಾವಿರ ನಗದನ್ನು ಯುವಕನೊಬ್ಬನ ಖಾತೆಗೆ ವರ್ಗಾಯಿಸಿ ಯುವತಿ ಪರಾರಿಯಾಗಿದ್ದಳು. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಯುವತಿಯ ತಾಯಿ ದೂರು ನೀಡಿದ್ದರು. ಈ ಸಂದರ್ಭದಲ್ಲಿ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಲವ್ ಜಿಹಾದ್ ಎಂದು ಆರೋಪಿಸಿತ್ತು.
ಆದರೆ, ಈ ನಾಪತ್ತೆ ಪ್ರಕರಣದ ಹಿಂದೆ ಕುಟುಂಬವೊಂದು ಸೇಡು ತೀರಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ನಾಪತ್ತೆಯಾದ ಯುವತಿಯ ತಾಯಿ ಅನ್ಯಕೋಮಿನ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದರು. ಇದರಿಂದ ಯುವತಿಯ ಮನೆಯವರು ಅವಮಾನಕ್ಕೊಳಗಾಗಿ ಸೇಡು ತೀರಿಸಲು ಕಾಯುತ್ತಿದ್ದರು. ಈ ಮಹಿಳೆಯ ಪುತ್ರಿಗೆ ನಿಶ್ಚಿತಾರ್ಥವಾದ ಬೆನ್ನಲ್ಲೇ ಕುಟುಂಬ ಆಕೆಯ ಮೂಲಕ ಸೇಡು ತೀರಿಸಲು ನಿರ್ಧರಿಸಿತ್ತು. ಆಕೆಯನ್ನು ಮನೆಬಿಟ್ಟು ಬರುವಂತೆ ಸೂಚಿಸಿದ ಮಹಿಳೆಯ ಹೆತ್ತವರು, ಗದಗದಲ್ಲಿರುವ ಮಹಿಳೆಯ ಅಕ್ಕನ ಮಗನಿಗೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಗದಗದಲ್ಲಿ ರಿಜಿಸ್ಟರ್ ಮದುವೆ ಆಗಿರುವ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದ ತಮ್ಮ ಮನೆ ಮಗಳನ್ನು ಗದಗದ ಮುಸ್ಲಿಂ ಕುಟುಂಬ ಆಕೆಯ ಮಗಳ ಮೂಲಕ ಮತ್ತೆ ತಮ್ಮ ಕುಟುಂಬಕ್ಕೆ ಸೇರಿಸಿ ಸೇಡು ತೀರಿಸಿಕೊಂಡಿದೆ.