ನವದೆಹಲಿ: ಅನುತ್ಪಾದಕ ಆಸ್ತಿ (ಎನ್‌ಪಿಎ) ಹೆಸರಿನಲ್ಲಿ ಕಡಿಮೆ ಬೆಲೆಗೆ ಹೋಟೆಲ್ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಬಿಐ ಮಾಜಿ ಅಧ್ಯಕ್ಷರನ್ನು ರಾಜಧಾನಿ ಪೊಲೀಸರು ಬಂಧಿಸಿದ್ದಾರೆ.
200 ಕೋಟಿ ರೂ ಮೌಲ್ಯದ ಹೋಟೆಲ್ ಅನ್ನು ಅನುತ್ಪಾದಕ ಆಸ್ತಿಯ ಹೆಸರಿನಲ್ಲಿ 25 ಕೋಟಿ ರೂಪಾಯಿಗೆ ಮಾರಾಟ ಮಾಡಿದ ಆರೋಪದಲ್ಲಿ ಎಸ್‌ಬಿಐ ಮಾಜಿ ಅಧ್ಯಕ್ಷ ಪ್ರದೀಪ್ ಚೌಧರಿ ಅವರನ್ನು ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತ ಚೌಧರಿ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರಾಜಸ್ಥಾನದ ಜೈಸಲ್ಮೇರ್ ಮೂಲದ ಹೋಟೆಲ್ ಸಮೂಹವೊಂದು 2008ರಲ್ಲಿ ಎಸ್‌ಬಿಐನಿಂದ 24 ಕೋಟಿ ರೂಪಾಯಿ ಸಾಲ ಪಡೆದಿತ್ತು. ತದನಂತರ ಬ್ಯಾಂಕ್ ಸಾಲ ಮರುಪಾವತಿ ಮಾಡದ ಕಾರಣ ಕಂಪನಿಗೆ ಸೇರಿದ ಎರಡು ಹೋಟೆಲ್‌ಗಳನ್ನು ಅನುತ್ಪಾದಕ ಆಸ್ತಿ (ಎನ್‌ಪಿಎ) ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಆ ಸಂದರ್ಭದಲ್ಲಿ ಪ್ರದೀಪ್ ಚೌಧರಿ ಎಸ್‌ಬಿಐ ಅಧ್ಯಕ್ಷರಾಗಿದ್ದರು.
ಹೋಟೆಲ್‌ಗಳನ್ನು 'ಅನುತ್ಪಾದಕ ಆಸ್ತಿ' ಎಂದು ಘೋಷಿಸಿ ಅಂದಿನ ಎಸ್‌ಬಿಐ ಅಧ್ಯಕ್ಷ ಪ್ರದೀಪ್ ಬೇರೆ ಕಂಪನಿಗೆ 25 ಕೋಟಿ ರೂಪಾಯಿಗೆ ಹೋಟೆಲ್ ಮಾರಾಟ ಮಾಡಿದ್ದಾರೆ. ಎಸ್‌ಬಿಐನಿಂದ ನಿವೃತ್ತಿಯ ನಂತರ ಅವರು ಹೋಟೆಲ್‌ಗಳನ್ನು ಮಾರಾಟ ಮಾಡಿದ ಕಂಪನಿಯ ನಿರ್ದೇಶಕರಾದ್ದರು.
2017ರಲ್ಲಿ ಹೊಟೇಲ್‌ಗಳ ಮೌಲ್ಯ ಸುಮಾರು 160 ಕೋಟಿ ರೂ.ಗಳಷ್ಟಿದ್ದು, ಈಗ ಸುಮಾರು ರೂ. 200 ಕೋಟಿ ರೂಪಾಯಿ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಟೆಲ್ ಸಮೂಹದ ಮಾಲೀಕರು ಜೈಸಲ್ಮೇರ್ ಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯವು ಪ್ರದೀಪ್ ಚೌಧರಿ ಅವರನ್ನು ಬಂಧಿಸುವಂತೆ ಆದೇಶಿಸಿದೆ. ಇದೀಗ ದೆಹಲಿಯಲ್ಲಿದ್ದ ಪ್ರದೀಪ್ ಚೌಧರಿಯನ್ನು ಪೊಲೀಸರು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ.