ನವದೆಹಲಿ: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಬೆಂಗಳೂರು ಮೂಲದ ಸುಕೇಶ್‌ನಿಂದ ಜೈಲು ಸಿಬ್ಬಂದಿ ಕೋಟ್ಯಂತರ ರೂಪಾಯಿ ಲಂಚ ಪಡೆದಿದ್ದ ಆರೋಪ ಪ್ರಕರಣದ ತನಿಖೆಯನ್ನು ದೆಹಲಿಯ ಆರ್ಥಿಕ ಅಪರಾಧಗಳ ವಿಭಾಗವು ಚುರುಕುಗೊಳಿಸಿದೆ.
82 ಜೈಲು ಸಿಬ್ಬಂದಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ದಾಖಲಿಸಿಕೊಂಡಿರುವ ಎಕಾನಾಮಿಕ್ ಅಫೆನ್ಸ್ ವಿಂಗ್, ತಿಹಾರ್ ಜೈಲಿನ ಏಳು ಅಧಿಕಾರಿಗಳ ವಿಚಾರಣೆಗೆ ಒಳಪಡಿಸಲು ಜೈಲಿನ ಉನ್ನತ ಅಧಿಕಾರಿಗಳ ಅನುಮತಿ ಕೋರಿದೆ.
ಬಹುಕೋಟಿ ವಂಚನೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸುಕೇಶ್‌ನಿಂದ ಜೈಲಿನ ಸಿಬ್ಬಂದಿ ಕೋಟ್ಯಂತರ ರೂಪಾಯಿ ಲಂಚ ಪಡೆದ ಆರೋಪ ಇದೆ. ಹೀಗಾಗಿ ಜೈಲು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲು ದೆಹಲಿ ಪೊಲೀಸರು ತಿಹಾರ್ ಆಡಳಿತದ ಅನುಮತಿ ಕೋರಿದ್ದಾರೆ.
ಡಿಜಿ ಉತ್ತರಕ್ಕಾಗಿ ಪೊಲೀಸರಿಂದ ವೇಟಿಂಗ್
ಈ ಕುರಿತು ತಿಹಾರ್ ಜೈಲಿನ ಡಿಜಿ ಸಂದೀಪ್ ಗೋಯಲ್ ಅವರಿಗೆ ಪತ್ರ ಬರೆಯಲಾಗಿದ್ದು, ಗೋಯಲ್ ಉತ್ತರಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ. ಬಳಿಕ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ತಿಹಾರ್ ಜೈಲಿನ ಭ್ರಷ್ಟ ಅಧಿಕಾರಿಗಳ ತನಿಖೆ ನಡೆಸಲಾಗುತ್ತದೆ.
ಮೂಲಗಳ ಪ್ರಕಾರ, ಫೋರ್ಟಿಸ್ ಹೆಲ್ತ್‌ಕೇರ್‌ನ ಮಾಜಿ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಪತ್ನಿ ಅದಿತಿ ಸಿಂಗ್ ಅವರಿಂದ 220 ಕೋಟಿ ರೂಪಾಯಿ ಸುಲಿಗೆ ಮಾಡಿದ ಬಗ್ಗೆ ಸುಕೇಶ್ ವಿರುದ್ಧ ಆರ್ಥಿಕ ಅಪರಾಧ ವಿಭಾಗವು ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್-MCOCA ಅಡಿ ಪ್ರಕರಣ ದಾಖಲಿಸಿದೆ.
ಜೈಲಿನಿಂದಲೇ ಡೀಲ್ ಮಾಡಿದ್ದ ಆರೋಪಿ
ರೋಹಿಣಿ ಜೈಲಿನಲ್ಲಿದ್ದ ಆರೋಪಿ ಸುಕೇಶ್, ಫೋರ್ಟಿಸ್ ಮಾಜಿ ಪ್ರವರ್ತಕ ಶಿವೇಂದ್ರ ಸಿಂಗ್ ಪತ್ನಿ ಅದಿತಿ ಸಿಂಗ್ ಅವರಿಂದ 220 ಕೋಟಿ ರೂ. ಸುಲಿಗೆ ಮಾಡಿರುವುದು ಗಮನಾರ್ಹ. ಅದಿತಿ ಸಿಂಗ್ ಪತಿಯನ್ನು ಜೈಲಿನಿಂದ ಹೊರತರುವುದಾಗಿ ಹೇಳಿ ಈ ಸುಲಿಗೆ ಮಾಡಿದ್ದ. ಇಡೀ ಕೃತ್ಯಕ್ಕೆ ಜೈಲು ಸಿಬ್ಬಂದಿ ಸಂಪೂರ್ಣ ಸಹಕಾರ ನೀಡಿದ್ದಾರೆ. ಜೈಲು ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ 30 ಕೋಟಿ ರೂ.ಗೂ ಹೆಚ್ಚು ಲಂಚ ನೀಡಿರುವುದಾಗಿ ಆರೋಪಿ ಬಹಿರಂಗಪಡಿಸಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ