ನವದೆಹಲಿ: ದಿಲ್ಲಿಯ ಕರೋಲ್‌ಬಾಗ್‌ನ ಚರಂಡಿಯಿಂದ ಮಂಗಳವಾರ ಮೃತದೇಹವೊಂದನ್ನು ವಶಪಡಿಸಿಕೊಂಡಿದ್ದ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ದೊರೆತಿತ್ತು. ಸೋಮವಾರ ಯುವಕನನ್ನು ಹತ್ಯೆ ಮಾಡಿದ್ದ ಇಬ್ಬರನ್ನು ಕೇಂದ್ರ ಜಿಲ್ಲಾ ಪೊಲೀಸರು ಬುಧವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಲೆಗಾರರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದು ಹೇಗೆ? ಪೊಲೀಸರು ಕೊಲೆಯಾದ ವ್ಯಕ್ತಿ ಕರೆಗಳನ್ನು ಸ್ವೀಕರಿಸಿದ ಎರಡು ಸಂಖ್ಯೆಗಳನ್ನು ಪತ್ತೆಹಚ್ಚಿದ್ದರು, ಈ ಮುಖಾಂತರವೇ ರಾಜಸ್ಥಾನದ ಚುರು ಜಿಲ್ಲೆಯ ಇಬ್ಬರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತರನ್ನು ಕರೋಲ್ ಬಾಗ್ ಮೂಲದ ವಿಷು ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನು ಚುರು ಜಿಲ್ಲೆಯ ನಿವಾಸಿಗಳಾದ ಸಂಜಯ್ ಬುಚಾ ಮತ್ತು ಸೀತಾರಾಮ್ ಸುತಾರ್ ಎಂದು ಗುರುತಿಸಲಾಗಿದೆ. ರಾಜಸ್ಥಾನದ ಚುರು ಜಿಲ್ಲೆಯ ಹುಡುಗಿಯೊಂದಿಗೆ ವಿಷುಗೆ ಸಂಬಂಧವಿದೆ ಎಂದು ಪ್ರಮುಖ ಆರೋಪಿ ಸಂಜಯ್ ಪೊಲೀಸರಿಗೆ ತಿಳಿಸಿದ್ದಾನೆ.
ಹುಡುಗಿಯನ್ನು ಇಷ್ಟಪಟ್ಟಿದ್ದ ಸಂಜಯ್ ಮತ್ತು ಅವನ ಸ್ನೇಹಿತ ಸೀತಾರಾಮ್, ವಿಷು ಅವರೊಂದಿಗೆ ದೀಪಾವಳಿ ಆಚರಿಸಲು ದೆಹಲಿಗೆ ಬಂದಿದ್ದರು ಎಂದು ಉಪ ಪೊಲೀಸ್ ಆಯುಕ್ತ ಶ್ವೇತಾ ಚೌಹಾಣ್ ಹೇಳಿದ್ದಾರೆ.
ತನ್ನ ಫೋನ್‌ನಿಂದ ಹುಡುಗಿಯ ಚಿತ್ರಗಳನ್ನು ಅಳಿಸಲು ನಿರಾಕರಿಸಿದ ನಂತರ ಸಂಜಯ್ ವಿಷುವನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಸಂಜಯ್ ಮತ್ತು ಸೀತಾರಾಮ್ ಅವರು ವಿಷು ಅವರ ಮೃತದೇಹವನ್ನು ತಮ್ಮ ಕಾರಿನಲ್ಲಿ ಸುಮಾರು ಎರಡು ಗಂಟೆಗಳ ಕಾಲ ಸಾಗಿಸಿದ್ದರು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಇವರ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ ಎನ್ನಲಾಗಿದೆ.
ವೆಬ್ ಸಿರೀಸ್ವೊಂದರಿಂದ ಪ್ರಭಾವಿತರಾಗಿದ್ದ ಕೊಲೆಗಾರರು: ಇದನ್ನೇ ಬಂಡವಾಳ ಮಾಡಿಕೊಂಡ ದುರುಳರು ಶವವನ್ನು ಕರೋಲ್ ಬಾಗ್‌ನ ಚರಂಡಿಗೆ ಎಸೆದು ಪರಾರಿ ಆಗಿದ್ದರು. ಆರೋಪಿಗಳು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುವ ವೆಬ್ ಸರಣಿಯೊಂದರಿಂದ ಪ್ರಭಾವಿತರಾಗಿ ಈ ಕೃತ್ಯ ಎಸೆಗಿದ್ದಾರೆ ಎಂದು ತನಿಖೆಗೆ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ:ಮರ್ಮಾಂಗ ಕತ್ತರಿಸಿ ವ್ಯಕ್ತಿ ಕೊಲೆ ಪ್ರಕರಣ: ಪತ್ನಿ ಜೊತೆ ಪ್ರಿಯಕರನ ಬಂಧನ