ನವದೆಹಲಿ: ಗಣರಾಜ್ಯೋತ್ಸವ ದಿನದಂದು ನಡೆದ ಕೆಂಪು ಕೋಟೆ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಅಪರಾಧ ಶಾಖೆ ಪೊಲೀಸರು ಬಂಧಿತ ಆರೋಪಿಗಳಾದ ಪಂಜಾಬ್ ನಟ ದೀಪ್ ಸಿಧು ಮತ್ತು ಇಕ್ಬಾಲ್ ಸಿಂಗ್ರನ್ನು ಘಟನಾ ಸ್ಥಳಕ್ಕೆ ಕರೆದೊಯ್ದಿದ್ದಾರೆ.
ಜ.26ರಂದು ನಡೆದಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾತ್ಮಕ ರೂಪ ಪಡೆದಿತ್ತು. ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾನಿರತ ರೈತರು, ಕೋಟೆ ಮೇಲೆ ಧ್ವಜ ಹಾರಿಸಿದ್ದರು. ಪರಿಸ್ಥಿತಿ ನಿಯಂತ್ರಿಸುತ್ತಿದ್ದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದರು. ಈ ಹಿಂಸಾಚಾರದಲ್ಲಿ ಸುಮಾರು 394 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: ಕಾರ್ಮಿಕ ಸಾವು
ಘಟನೆ ಬಳಿಕ ಎರಡು ವಾರಗಳ ಕಾಲ ದೀಪ್ ಸಿಧು ತಲೆಮರೆಸಿಕೊಂಡಿದ್ದರು. ಇವರ ಬಗ್ಗೆ ಮಾಹಿತಿ ನೀಡಿದವರಿಗೆ 1 ಲಕ್ಷ ರೂ.ಗಳ ನಗದು ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಇಕ್ಬಾಲ್ ಸಿಂಗ್, ಕರ್ತವ್ಯದಲ್ಲಿದ್ದ ಪೊಲೀಸರಿಗೆ ಬೆದರಿಕೆ ಹಾಕುತ್ತಿರುವ ಹಾಗೂ ಅವರ ಮೇಲೆ ಹಲ್ಲೆ ಮಾಡಲು ಪ್ರತಿಭಟನಾಕಾರರನ್ನು ಪ್ರೇರೇಪಿಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು.
ಇವರಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದ ಪೊಲೀಸರು, ಕೃತ್ಯದ ದೃಶ್ಯವನ್ನು ಮರುಸೃಷ್ಟಿಸಲು ಆರೋಪಿಗಳನ್ನು ಇಂದು ಕೆಂಪು ಕೋಟೆಗೆ ಕರೆದೊಯ್ದಿದ್ದಾರೆ.