ವಿಜಯವಾಡ: ಅಪ್ರಾಪ್ತ ವಯಸ್ಕರ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ಆರೋಪದಲ್ಲಿ ವಿಜಯವಾಡ ಸೈಬರ್ ಕ್ರೈಂ ಪೊಲೀಸರು ಎರಡು ದಿನಗಳಲ್ಲಿ ನಾಲ್ಕು ಪ್ರಕರಣಗಳನ್ನು ದಾಖಲಿಸಿದ್ದಾರೆ. ವಿಜಯವಾಡದಿಂದ ಫೇಸ್‌ಬುಕ್, ಯೂಟ್ಯೂಬ್, ಜಿಮೇಲ್ ಮೂಲಕ ಮಕ್ಕಳ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಲಾಗುತ್ತಿದೆ ಎಂದು ಸಿಐಡಿ ಇಲಾಖೆ ನೀಡಿದ ಮಾಹಿತಿ ಆಧರಿಸಿ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಒಂದು ಪ್ರಕರಣದಲ್ಲಿ 12 ಆರೋಪಿಗಳಿದ್ದು, ಅವರಲ್ಲಿ ಮೂವರು ಮಹಿಳೆಯರಿದ್ದಾರೆ ಎಂಬುದು ಗಮನಾರ್ಹ.
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಅಶ್ಲೀಲ ಚಿತ್ರ ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದು ಕಾನೂನು ಪ್ರಕಾರ ಗಂಭೀರ ಅಪರಾಧವಾಗಿದೆ. ಈ ಬಗ್ಗೆ ಪೊಲೀಸರು ನಿರಂತರವಾಗಿ ಕಣ್ಗಾವಲಿರಿಸಿರುತ್ತಾರೆ. ಅಷ್ಟಾಗಿಯೂ ಯಾರಾದರೂ ಮಕ್ಕಳ ಪೋರ್ನ್ ಚಿತ್ರ ಅಪ್ಲೋಡ್ ಮಾಡಿದರೆ ಆಧುನಿಕ ತಂತ್ರಜ್ಞಾನದಿಂದ ತಕ್ಷಣವೇ ಅದನ್ನು ಕಂಡುಹಿಡಿಯಲಾಗುತ್ತದೆ. ಸಿಐಡಿ ಇಲಾಖೆಯು ಅಂಥ ವ್ಯಕ್ತಿಗಳ ವಿವರಗಳನ್ನು ಗುರುತಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸುತ್ತದೆ.
ವಿಜಯವಾಡದ ಕೆಲವರು ಮಕ್ಕಳ ಅಶ್ಲೀಲ ಚಿತ್ರಗಳನ್ನು ಇಂಟರನೆಟ್ಗೆ ಅಪ್ಲೋಡ್ ಮಾಡಿದ ವಿಷಯವನ್ನು ಸಿಐಡಿ ತಂಡ ಪೊಲೀಸರಿಗೆ ತಿಳಿಸಿತ್ತು. ಇದರನ್ವಯ ಕಾರ್ಯಾಚರಣೆ ನಡೆಸಿದ ವಿಜಯವಾಡ ಸೈಬರ್ಕ್ರೈಂ ಪೊಲೀಸರು ಮೂವರು ಮಹಿಳೆಯರು ಸೇರಿದಂತೆ 12 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳಾದ ಶೇಖ್ ಶೆಹನಾಜ್, ಟೆಂಟು ಬ್ರಹ್ಮಾನಂದ ರಾವ್, ಗುಡಿವಾಡ ವೆಂಕಟ ಮಣಿಕಂಠ ಶ್ರೀ ಪಾಂಡು ರಂಗ, ಚಕ್ಕ ಕಿರಣ್‌ಕುಮಾರ್ ರಾಮಕೃಷ್ಣ, ಎಸ್‌ಕೆ ನಾಗುಲ್ ಮಿರವಲಿ, ರವಿ ಯರ್ರಭನೇನಿ, ರವಿ ಅಂಜಯ್ಯ, ಕಟ್ಟಾ ಸಾಯಿಕೃಷ್ಣ, ಪಲ್ವಂಚ ತಿರುಮಲ ಲಕ್ಷ್ಮೀನರಸಿಂಹಾಚಾರ್ಯ, ಎಸ್‌ಕೆ ಅಂಜಲಿ, ಪುಲಿಪತಿ ಭಾವನಾ, ದಾಸಿ ಸರ್ಲಾ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ ವೇಣುಟುರುಮಿಲ್ಲಿಯ ಅಜಯ್ ಕುಮಾರ್ ಮತ್ತು ಕಮಲೇಶ್ ಕುಮಾರ್ ಚೌಧರಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಉಳಿದ ಎರಡು ಪ್ರಕರಣಗಳ ಆರೋಪಿಗಳ ವಿವರ ಇನ್ನಷ್ಟೇ ತಿಳಿಯಬೇಕಿದೆ.
ಇದನ್ನೂ ಓದಿ: ಅಶ್ಲೀಲ ವಿಡಿಯೋ ನೋಡ್ತಿದ್ದ ಪತಿ, ಸಲ್ಲಾಪದಲ್ಲಿ ಸಿಕ್ಕಿಬಿದ್ದ ಪತ್ನಿ: ಮ್ಯಾಟ್ರಿಮೋನಿಯಲ್ ದಂಪತಿಗಳ ಕಹಾನಿ