ಮುಂಬೈ: ‘ಬುಲ್ಲಿ ಬಾಯ್’ ಆ್ಯಪ್ ಪ್ರಕರಣದ ಮೂವರು ಆರೋಪಿಗಳಾದ ವಿಶಾಲ್ ಕುಮಾರ್ ಝಾ, ಶ್ವೇತಾ ಸಿಂಗ್ ಹಾಗೂ ಮಯಾಂಕ್ ರಾವತ್ ಅವರ ಜಾಮೀನು ಅರ್ಜಿಯನ್ನು ಬಾಂದ್ರಾ ನ್ಯಾಯಾಲಯ ತಿರಸ್ಕರಿಸಿದೆ.
ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ಮುಂಬೈ ಸೈಬರ್ ಪೊಲೀಸರು ಕೋರ್ಟ್‌ಗೆ ಮನವಿ ಮಾಡಿದ್ದರು. ಪೊಲೀಸರ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಆರೋಪಿಗಳ ಜಾಮೀನು ಅರ್ಜಿಯನ್ನ ವಜಾ ಮಾಡಿದೆ. ಈ ಮೂವರು ಆರೋಪಿಗಳು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಡಿಶಾದಲ್ಲಿಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೀರಜ್ ಸಿಂಗ್ ಎಂದು ಗುರುತಿಸಲಾಗಿದೆ.
'ಬುಲ್ಲಿ ಬಾಯ್' ಅಪ್ಲಿಕೇಶನ್ ಅನ್ನು ಬಿಷ್ಣೋಯ್ ಹಾಗೂ ಸುಲ್ಲಿ ಡೀಲ್ಸ್ ಅಪ್ಲಿಕೇಶನ್ ಅನ್ನು ಓಂಕಾರೇಶ್ವರ್ ಠಾಕೂರ್ ಎಂಬುವರು ನಿರ್ಮಿಸಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿಸಿದ್ದು, ಆರೋಪಿಗಳನ್ನು ಬಂಧಿಸಲು ಮುಂಬೈ ಪೊಲೀಸರ ತಂಡವು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದೆ.
ನೂರಾರು ಮುಸ್ಲಿಂ ಮಹಿಳೆಯರನ್ನು 'ಬುಲ್ಲಿ ಬಾಯ್' ಆ್ಯಪ್‌ನಲ್ಲಿ ಹರಾಜಿಗೆ ಪಟ್ಟಿ ಮಾಡಿದ್ದ ಆರೋಪಿಗಳು, ಅನುಮತಿಯಿಲ್ಲದೆ ಛಾಯಾಚಿತ್ರಗಳನ್ನು ತೆಗೆದಿದ್ದರು ಎಂಬುದು ತನಿಖೆಯಿಂದ ಬಹಿರಂಗವಾಗಿತ್ತು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ