ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿ ಹತ್ತಾರು ಜನರಿಂದ ಲಕ್ಷಾಂತರ ರೂ.ವಂಚನೆ ಎಸಗಿರುವ ಆರೋಪಿ ಯುವರಾಜ್ ಸ್ವಾಮಿ ವಂಚನೆ ಪ್ರಕರಣ ಚುರುಕುಗೊಂಡಿದೆ. ತಮ್ಮ ಬೆಳೆ ಬೇಯಿಸಿಕೊಳ್ಳಲು ಆರೋಪಿಗೆ ಲಂಚ ನೀಡಿದ್ದ ಮೂವರ ವಿರುದ್ಧ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಅಧಿಕಾರಿಗಳು ಪ್ರತ್ಯೇಕ ಮೂರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜನಾಧಿಕಾರ ಸಂಘರ್ಷ ಪರಿಷತ್ ಸಹ ಅಧ್ಯಕ್ಷ ಆದರ್ಶ ಆರ್. ಐಯ್ಯರ್ ಎಂಬುವರು ದೂರು ನೀಡಿದ ಮೇರೆಗೆ ಕೆ.ಪಿ.ಸುಧೀಂದ್ರ ರೆಡ್ಡಿ, ಜಿ ನರಸಿಂಹಯ್ಯ ಹಾಗೂ ಗೋವಿಂದಯ್ಯ ಎಂಬುವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ಕಾಯ್ದೆಯಡಿ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಣ್ಯವ್ಯಕ್ತಿಗಳು, ಬಿಜೆಪಿ ಹಿರಿಯ ನಾಯಕರು ಹಾಗೂ ಸರ್ಕಾರದ ಉನ್ನತ ನಾಯಕರು ಪರಿಚಯವಿದೆ ಎಂದು ಬಿಂಬಿಸಿಕೊಂಡಿದ್ದ ಯುವರಾಜ್ ಸ್ವಾಮಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ.
ಈ ಸಂಬಂಧ ಈತನ ವಿರುದ್ಧ ಜ್ಞಾನಭಾರತಿ, ಅನ್ನಪೂರ್ಣೇಶ್ವರಿ ನಗರ, ಹೈಗ್ರೌಂಡ್ಸ್, ಕೆಂಗೇರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಬಳಿಕ ಸಿಸಿಬಿ ಪೊಲೀಸರು ಆರೋಪಿ ಯುವರಾಜ್‌ನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಸದ್ಯ ಯುವರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಸಜೆ ಅನುಭವಿಸುತ್ತಿದ್ದಾನೆ.
ಲಂಚ ತೆಗೆದುಕೊಳ್ಳುವಷ್ಟೇ ಲಂಚ ಕೊಡೋದು ಅಷ್ಟೇ ತಪ್ಪು..
2018ರ ಮುನ್ನ ಲಂಚ ಸ್ವೀಕರಿಸುವುದು ಅಪರಾಧವಾಗಿತ್ತು. ಅದಾದ ಬಳಿಕ ಭ್ರಷ್ಟಾಚಾರ ನಿಗ್ರಹ ಕಾಯ್ದೆಗೆ ತಿದ್ದುಪಡಿ ತಂದು ಲಂಚ ಕೊಡುವವರು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದರಂತೆ ಯುವರಾಜ್ ವಂಚನೆ ಪ್ರಕರಣದಲ್ಲಿ ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲು ಲಂಚ ನೀಡಿದ್ದ ಮೂವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಪ್ರಕರಣ - 1
ಕೆಎಸ್ ಆರ್ ಟಿಸಿ ಅಧ್ಯಕ್ಷ ಸ್ಥಾನ ಪಡೆಯಲು 1 ಕೋಟಿ ಲಂಚ
ಗಣ್ಯ ವ್ಯಕ್ತಿಗಳು ಹಾಗೂ ರಾಜಕಾರಣಿಗಳ ಪರಿಚಯವಿದೆ ಎಂದು ಹೇಳಿಕೊಂಡಿದ್ದ ಆರೋಪಿ ಯುವರಾಜ್ ನನ್ನ ನಂಬಿ ಕೆಎಸ್ ಆರ್ ಟಿಸಿ ಅಧ್ಯಕ್ಷಗಿರಿ ಕೊಡಿಸುವ ನಂಬಿಕೆ ಮೇರೆಗೆ ಕಳೆದ ಡಿಸೆಂಬರ್‌ನಲ್ಲಿ ವಂಚಕನಿಗೆ ಸುಧೀಂದ್ರ ಎಂಬಾತ 1 ಕೋಟಿ ರೂ.ಲಂಚ ನೀಡಿದ್ದಾನೆ. ಬ್ಯಾಂಕ್ ಮೂಲಕ ಹಣ ಸಂದಾಯ ಮಾಡುವ ಮೂಲಕ ಸುಧೀಂದ್ರ ಅಕ್ರಮ ಎಸಗಿರುವ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಲಂಚ ನೀಡಿದ್ದ ಸುಧೀಂದ್ರ ವಿರುದ್ಧ ಅಧಿಕಾರಿಗಳು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ - 2
ಅಳಿಯನಿಗೆ ಕೆಲಸ ಕೊಡಿಸಲು 30 ಲಕ್ಷ ರೂ. ಲಂಚ ಕೊಟ್ಟ ಮಾವ
ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಗೋವಿಂದಯ್ಯ ಎಂಬುವರು ತಮ್ಮ ಅಳಿಯನಿಗೆ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಮ್ಯಾನೇಜರ್ ಹುದ್ದೆ ಕೊಡಿಸಲು ಯುವರಾಜ್‌ಗೆ 30 ಲಕ್ಷ ಹಣ ಲಂಚ ನೀಡಿ ಕೈ ಸುಟ್ಟಿಕೊಂಡಿದ್ದರು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸಿ ಆರೋಪಿತನ ವಿರುದ್ಧ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಪ್ರಕರಣ-3
ಮಗನಿಗೆ ಎಇಇ ಕೆಲಸ ಕೊಡಿಸಲು ಲಕ್ಷಗಟ್ಟಲೇ ಹಣ ಕೊಟ್ಟ ಅಪ್ಪ!
ತನ್ನ ಮಗನಿಗೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಕೆಲಸ ಕೊಡಿಸಲು ತಂದೆ ಡಾ.ಜಿ.ನರಸಿಂಹಸ್ವಾಮಿ ಎಂಬುವರು ವಂಚಕ ಯುವರಾಜ್ ನಿಗೆ 30 ಲಕ್ಷ ರೂಪಾಯಿ ಹಣ ನೀಡಿದ್ದ. ಕಳೆದ ವರ್ಷ ಅಕ್ಟೋಬರ್ 10 ರಂದು ಬ್ಯಾಂಕ್ ಮುಖಾಂತರ ಹಾಗೂ ಇನ್ನುಳಿದ ಹಣವನ್ನು ನೇರವಾಗಿ ನೀಡಿದ್ದರು. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹಸ್ತಾಂತರವಾಗಿ ತನಿಖಾಧಿಕಾರಿಗಳು ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪ್ರಕರಣ ದಾಖಲಾದ ಮೂವರು ವಿರುದ್ಧ ಲಂಚ ನೀಡಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆದರ್ಶ ಆರ್. ಐಯ್ಯರ್ ನೀಡಿದ ದೂರಿನ ಮೇರೆಗೆ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದೆ.