ಚೆನ್ನೈ: ಐಐಟಿ ಮದ್ರಾಸ್ನಲ್ಲಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬರ ಶವ ರೈಲ್ವೆ ಚೆನ್ನೈನ ಅವಾಡಿ ಬಳಿಯ ಹಳಿಯ ಮೇಲೆ ಪತ್ತೆಯಾಗಿದೆ. ಅವಾಡಿಯ ರೈಲ್ವೆ ಹಳಿಯ ಬಳಿ ಕೆಲಸ ಮಾಡುತ್ತಿದ್ದ ರೈಲ್ವೆ ಇಲಾಖೆ ಕಾರ್ಮಿಕರಿಗೆ ಮೃತದೇಹ ಕಾಣಿಸಿದೆ. ಒಡಿಶಾ ಮೂಲದ ಮೃತ ಯುವತಿಯ ಮುಖ ಮತ್ತು ಹಣೆಯ ಮೇಲೆ ಗಾಯದ ಗುರುತುಗಳಿವೆ.
ಶವ ಪತ್ತೆಯಾದ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವತಿಯ ಸಾವಿಗೆ ಕಾರಣಗಳನ್ನು ಪತ್ತೆ ಹಚ್ಚುವ ಸಲುವಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತ ಯುವತಿಯ ಹೆಸರು ಮೇಘಶ್ರೀ (30) ಎಂದು ತಿಳಿದು ಬಂದಿದ್ದು, ಒಡಿಶಾದ ಮೋಹನ ಪಠಾಣ ಎಂಬುವರ ಪುತ್ರಿ. ಅವಿವಾಹಿತೆಯಾದ ಈಕೆ ದೆಹಲಿ ವಿಶ್ವವಿದ್ಯಾಲಯದಿಂದ ಎಂಟೆಕ್ ಮತ್ತು ಪಿಎಚ್ಡಿ ಪದವಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಮೇಘಶ್ರೀ ಚೆನ್ನೈನ ಅಡ್ಯಾರನಲ್ಲಿನ ಐಐಟಿ ಕೇಂದ್ರದ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು. ಐಐಟಿಯಲ್ಲಿ ಮೂರು ತಿಂಗಳ ಸಂಶೋಧನಾ ಅಧ್ಯಯನಕ್ಕೆ ಬಂದಿದ್ದರು. ಆದರೆ ಅಡ್ಯಾರ್ನಿಂದ ಯುವತಿ ಅವಾಡಿಗೆ ಏಕೆ ಬಂದರು ಎಂಬುದರ ಬಗ್ಗೆ ಮಾಹಿತಿ ಗೊತ್ತಾಗಿಲ್ಲ.
ರೈಲಿನಲ್ಲಿ ಹೋಗುತ್ತಿರುವಾಗ ಅಕಸ್ಮಾತ್ ಆಗಿ ಕೆಳಗೆ ಬಿದ್ದಿದ್ದಾರಾ ಅಥವಾ ಅವರ ಸಾವಿಗೆ ಮತ್ತೇನಾದರೂ ಕಾರಣವಿದೆಯಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಐಐಟಿ ಸಂಶೋಧನಾ ವಿದ್ಯಾರ್ಥಿನಿಯ ಸಾವು ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.