ನಿಮ್ತಾ (ಪಶ್ಚಿಮ ಬಂಗಾಳ) : ಕಳೆದ ತಿಂಗಳು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರು ಎನ್ನಲಾಗಿದ್ದ ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯಕರ್ತನ ತಾಯಿ ಇಂದು ಮೃತಪಟ್ಟಿದ್ದು, ಕೇಂದ್ರ ನಾಯಕರು ಇದನ್ನು ಖಂಡಿಸಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನಿಮ್ತಾ ಪ್ರದೇಶದ ಬಿಜೆಪಿ ಕಾರ್ಯಕರ್ತ ಗೋಪಾಲ್ ಮಜುಂದಾರ್ ಅವರ ತಾಯಿ ಶೋಭಾ ಮಜುಂದಾರ್ (85) ಮೃತ ವೃದ್ಧೆ. ನಮ್ಮ ಮನೆಗೆ ನುಗ್ಗಿದ ಮೂವರು ಟಿಎಂಸಿ ಕಾರ್ಯಕರ್ತರು ನನ್ನ ಅಮ್ಮನ ಮುಖ, ತಲೆಗೆ ಬಲವಾಗಿ ಹೊಡೆದು ಹಲ್ಲೆ ಮಾಡಿದ್ದರು ಎಂದು ಫೆಬ್ರವರಿಯಲ್ಲಿ ಗೋಪಾಲ್ ಮಜುಂದಾರ್ ಆರೋಪಿಸಿದ್ದರು.
ಗೋಪಾಲ್ರ ಮನೆಗೆ ಭೇಟಿ ನೀಡಿದ್ದ ಬಿಜೆಪಿ ನಾಯಕ ಸುವೆಂಧು ಅಧಿಕಾರಿ, ಶೋಭಾರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶೋಭಾರನ್ನು ನಾಲ್ಕು ದಿನಗಳ ಹಿಂದೆ ಮನೆಗೆ ಕರೆತರಲಾಗಿತ್ತು.
ಶಾ, ನಡ್ಡಾ ಖಂಡನೆ : ಶೋಭಾ ಮಜುಂದಾರ್ ಅವರ ಸಾವಿಗೆ ಸಂತಾಪ ಸೂಚಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಟಿಎಂಸಿ ವಿರುದ್ಧ ಕಿಡಿಕಾರಿದ್ದಾರೆ. ಟಿಎಂಸಿ ಗೂಂಡಾಗಳಿಂದ ಕ್ರೂರವಾಗಿ ಥಳಿಸಲ್ಪಟ್ಟ ಬಂಗಾಳದ ಮಗಳು ಶೋಭಾ ಮಜುಂದಾರ್ ಜೀ ನಿಧನ ನೋವುಂಟುಮಾಡಿದೆ.
ಅವರ ಕುಟುಂಬದ ನೋವು ಮಮತಾ ದೀದಿಯನ್ನ (ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ) ಕೊನೆವರೆಗೂ ಕಾಡಲಿದೆ. ಹಿಂಸಾಚಾರ ಮುಕ್ತ ರಾಜ್ಯಕ್ಕಾಗಿ, ನಮ್ಮ ಸಹೋದರಿಯರು ಮತ್ತು ತಾಯಂದಿರ ಸುರಕ್ಷಿತೆಗಾಗಿ ಬಂಗಾಳ ಹೋರಾಡಲಿದೆ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ನಿಮ್ತಾ ಪ್ರದೇಶದ ವೃದ್ಧ ತಾಯಿ ಶೋಭಾ ಮಜುಂದಾರ್ ಅವರ ಆತ್ಮಕ್ಕೆ ನಾನು ಶಾಂತಿ ಬಯಸುತ್ತೇನೆ. ತನ್ನ ಮಗ ಗೋಪಾಲ್ ಮಜುಂದಾರ್ ಬಿಜೆಪಿಯಲ್ಲಿರುವುದಕ್ಕಾಗಿ ಅವರು ತಮ್ಮ ಪ್ರಾಣ ತ್ಯಾಗ ಮಾಡಬೇಕಾಯಿತು. ಬಿಜೆಪಿ ಯಾವಾಗಲೂ ಅವರ ತ್ಯಾಗ ನೆನಪಿಸಿಕೊಳ್ಳುತ್ತದೆ.
ಅವರು ಬಂಗಾಳದ ತಾಯಿ ಹಾಗೂ ಬಂಗಾಳದ ಪುತ್ರಿ ಕೂಡ. ಬಂಗಾಳದ ತಾಯಂದಿರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗಾಗಿ ಬಿಜೆಪಿ ಯಾವಾಗಲೂ ಹೋರಾಡುತ್ತದೆ ಎಂದು ಜೆಪಿ ನಡ್ಡಾ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 27ರಂದು ಮೊದಲ ಹಂತದ ಚುನಾವಣೆ ನಡೆದಿದೆ. ರಾಜ್ಯದಲ್ಲಿ ಹಿಂಸಾಚಾರ ಮುಂದುವರೆದಿದೆ.