ಚೆನ್ನೈ: ಕ್ಯೂಆರ್ ಕೋಡ್ ಸ್ಟಿಕ್ಕರ್ ಬಳಸಿ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಬ್ಯಾಂಕಿನ ಪೇಟಿಎಂ ಕ್ಯೂಆರ್ ಕೋಡ್ ಸ್ಟಿಕ್ಕರ್ ಅನ್ನು ಹೊಟೇಲ್ನಲ್ಲಿನ ಕ್ಯೂಆರ್ ಸ್ಟಿಕ್ಕರ್ ಮೇಲೆ ಅಂಟಿಸಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಆನಂದ (39) ಎಂಬುವರು ಇಲ್ಲಿನ ತೋರೈಪಾಕ್ಕಂ ಪ್ರದೇಶದಲ್ಲಿ ಸಣ್ಣ ಟಿಫಿನ್ ಸೆಂಟರ್ ಒಂದನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮೂಲಕ ಗ್ರಾಹಕರು ಕಳುಹಿಸುವ ಹಣ ಬರುವುದು ನಿಂತು ಹೋಗಿತ್ತು. ಆದರೆ ತಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂಬ ವಿಷಯ ಇವರಿಗೆ ಕೆಲ ದಿನಗಳ ನಂತರ ಅರಿವಾಗಿತ್ತು. ಕೊನೆಗೆ ಈ ಬಗ್ಗೆ ಆನಂದ ಅವರು ಆಗಸ್ಟ್ 3 ರಂದು ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ತನಿಖೆಗಿಳಿದ ಪೊಲೀಸರು ಅಲ್ಲಿನ ಕ್ಯೂಆರ್ ಕೋಡ್ಗಳನ್ನು ಪರಿಶೀಲನೆ ಮಾಡಿದರು. ಆಗ ಅಲ್ಲಿ ಸ್ಕ್ಯಾನ್ ಮೂಲಕ ಪಾವತಿ ಮಾಡುವ ಹಣವೆಲ್ಲ ಕನ್ನಗಿ ನಗರದ ಶ್ರೀಧರ (21) ಎಂಬಾತನ ಖಾತೆಗೆ ಹೋಗುತ್ತಿರುವುದು ಪತ್ತೆಯಾಗಿತ್ತು. ಶ್ರೀಧರನನ್ನು ಪತ್ತೆ ಮಾಡಿ ಬಂಧಿಸಿದಾಗ ಆತ ನಡೆದುದೆಲ್ಲವನ್ನು ಬಾಯಿ ಬಿಟ್ಟಿದ್ದಾನೆ.
ತಾನು ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿರುವುದಾಗಿ ಮತ್ತು ಜನರನ್ನು ವಂಚಿಸುವ ಉದ್ದೇಶದಿಂದ ತಾನೊಬ್ಬ ಪೊಲೀಸ್ ಕಾನ್ ಸ್ಟೆಬಲ್ ಎಂಬ ಐಡೆಂಟಿಟಿ ಕಾರ್ಡ್ ತಯಾರಿಸಿಕೊಂಡಿರುವುದಾಗಿ ಹೇಳಿದ್ದಾನೆ. ತನ್ನ ಕ್ಯೂಆರ್ ಕೋಡ್ಗಳನ್ನು ಬೇರೆ ಕಡೆ ಅಂಟಿಸಿ ಈತ ಲಕ್ಷಾಂತರ ರೂಪಾಯಿ ಲಪಟಾಯಿಸಿರುವುದು ಬೆಳಕಿಗೆ ಬಂದಿದೆ. ಕಳೆದ 15 ದಿನಗಳ ಅವಧಿಯಲ್ಲಿಯೇ ಈತ 7 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಅಲ್ಲಿನ ಮಾಲೀಕರಿಗೆ ತಿಳಿಯದಂತೆ ಕ್ಯೂಆರ್ ಕೋಡ್ ಅಂಟಿಸಿ ವಂಚನೆ ಮಾಡಿದ್ದಾನೆ.
6 ವಿವಿಧ ಅಪರಾಧ ಸೆಕ್ಷನ್ಗಳಡಿ ಶ್ರೀಧರ್ ವಿರುದ್ಧ ಪ್ರಕರಣ ದಾಖಲಿಸಿ ಆಲಂದೂರು ಕೋರ್ಟ್ಗೆ ಹಾಜರುಪಡಿಸಲಾಗಿದೆ.