ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ಎನ್ಐಎ ಅಧಿಕಾರಿಗಳಿಂದ ಬಂಧಿಸಲ್ಪಟ್ಟ ದಂತ ವೈದ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪ್ರಕರಣದಲ್ಲಿ ಹನಿಟ್ರ್ಯಾಪ್, ಮತಾಂತರ ಹಾಗೂ ಉಗ್ರ ಸಂಘಟನೆಯ ನಂಟಿನ ಶಂಕೆ ವ್ಯಕ್ತವಾಗಿದೆ.
ಮಂಗಳೂರಿನ ಉಳ್ಳಾಲದಲ್ಲಿ ರಾಷ್ಟ್ರೀಯ ತನಿಖಾ ದಳ ಬಂಧಿಸಿರುವ ದಂತ ವೈದ್ಯೆ ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಪ್ರಕರಣದಲ್ಲಿ ಹಲವು ಸ್ಫೋಟಕ ಮಾಹಿತಿಗಳು ಹೊರ ಬರುತ್ತಿವೆ. ಮಾಜಿ ಶಾಸಕ ಇದನಬ್ಬರ ಮೊಮ್ಮಗನ ಮದುವೆ ಆದ ಬಳಿಕ ಇಸ್ಲಾಂಗೆ ಮತಾಂತರವಾಗಿದ್ದ ದೀಪ್ತಿ ಮಾರ್ಲ ಕ್ರೋನಿಕಲ್ ಫೌಂಡೇಶನ್ ಎಂಬ ಇನ್ಸ್ಟಾಗ್ರಾಂ ಪೇಜ್‌ನಲ್ಲಿ ಯುವಕರನ್ನ ಮತಾಂತರಕ್ಕೆ ಪ್ರೇರೇಪಿಸುತ್ತಿದ್ದಳಂತೆ. ಬಳಿಕ ಮತಾಂತರಗೊಂಡ ಯುವಕರನ್ನ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗೆ ಸೇರಿಸುತ್ತಿದ್ದಳು ಎಂದು ಎನ್‌ಐಎ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ.
ವಿವಿಧ ಹೆಸರುಗಳಲ್ಲಿ 15ಕ್ಕೂ ಹೆಚ್ಚು ನಕಲಿ ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನ ಹೊಂದಿದ್ದ ದೀಪ್ತಿ ಮಾರ್ಲ ಯುವಕರ ಜೊತೆ ಪ್ರೀತಿ, ಲೈಂಗಿಕ ಉದ್ದೇಶಿತ ಚಾಟ್ ಮಾಡುತ್ತಿದ್ದಳಂತೆ. ಹೀಗೆ ಯುವಕರನ್ನ ಹನಿಟ್ರ್ಯಾಪ್ ಮಾಡಿ ಇಸ್ಲಾಂಗೆ ಮತಾಂತರ ಮಾಡುತ್ತಿದ್ದಳು. ನಂತರ ಅವರನ್ನ ಐಸಿಸ್‌ಗೆ ಸೇರಲು ಕಳುಹಿಸುತ್ತಿದ್ದಳಂತೆ.
ಕಳೆದ ವರ್ಷ ಕಾಶ್ಮೀರಕ್ಕೆ ಹೋಗಿದ್ದ ಬಂಧಿತ ಆರೋಪಿ ಯುವಕರನ್ನ ಐಸಿಸ್‌ಗೆ ಸೆಳೆಯುವ ಕೆಲಸ ಮಾಡಿದ್ದಳಂತೆ. ಅಲ್ಲದೆ ಕೆಲ ತಿಂಗಳುಗಳ ಹಿಂದೆ ಎನ್‌ಐಎ ನಿಂದ ಬಂಧಿತನಾದ ಮಾದೇಶ್ ಪೆರುಮಾಳ್ ಎಂಬಾತನನ್ನ ಈಕೆಯೇ ಹನಿಟ್ರ್ಯಾಪ್ ಮಾಡಿ ಐಸಿಸ್‌ಗೆ ಸೇರಿಸಿದ್ದಳು ಎಂಬ ಸ್ಫೋಟಕ ವಿಚಾರವೂ ತನಿಖೆ ವೇಳೆ ಹೊರಬಿದ್ದಿದೆ. ಯುವಕರನ್ನ ಮತಾಂತರ ಮಾಡಲು ಈಕೆ ಎಷ್ಟು ಬೇಕಾದ್ರು ಖರ್ಚು ಮಾಡುತ್ತಿದ್ದಳು ಎನ್ನುವುದು ವಿಚಾರಣೆ ವೇಳೆ ಗೊತ್ತಾಗಿದೆ.
ಇದನ್ನೂ ಓದಿ: ಮಾಜಿ ಶಾಸಕ ಬಿ.ಎಂ.ಇದಿನಬ್ಬ ಪುತ್ರನ ಮನೆ ಮೇಲೆ NIA ದಾಳಿ; ಮೊಮ್ಮಗನ ಪತ್ನಿ ದೀಪ್ತಿ ಮರಿಯಂ ಬಂಧನ