ಹೈದರಾಬಾದ್: ಗೋವಾದಿಂದ ಕೊಕೇನ್ ತಂದು ಹೈದರಾಬಾದ್ನಲ್ಲಿ ಮಾರುತ್ತಿದ್ದ ಅರೇಬಿಕ್ ಟೀಚರ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಅಶ್ರಫ್ ಬೇಗ್ (38) ಎಂಬಾತನೇ ಬಂಧಿತ ಆರೋಪಿ. ಈತ ಗೋವಾದಲ್ಲಿ 3 ಸಾವಿರ ರೂಪಾಯಿಗೆ ಒಂದು ಗ್ರಾಂ ದರದಲ್ಲಿ ಕೊಕೇನ್ ಖರೀದಿಸಿ ಅದನ್ನು ಹೈದರಾಬಾದ್ನಲ್ಲಿ 15 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದ.
ರಾಷ್ಟ್ರೀಯ ಹೆದ್ದಾರಿಯ ಇಕ್ರಿಸಾಟ್ ಬಳಿ ಕೊಕೇನ್ ಮಾರುತ್ತಿದ್ದ ಈತನನ್ನು ಮಾಧಾಪುರ ಎಸ್ಓಟಿ ಪೊಲೀಸರು ಬಂಧಿಸಿದ್ದು, ಈತನ ಬಳಿಯಿಂದ 3.92 ಲಕ್ಷ ರೂಪಾಯಿ ಮೌಲ್ಯದ ಕೊಕೇನ್, 63,300 ರೂಪಾಯಿ ನಗದು, ಒಂದು ಬೈಕ್ ಮತ್ತು ಎರಡು ಐಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಿಂದೆಯೂ ಈತ ಡ್ರಗ್ ಪ್ರಕರಣದಲ್ಲಿ ಬಂಧಿತನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸೂರ್ಯ ನಗರದ ಟೋಲಿ ಚೌಕಿ ನಿವಾಸಿಯಾದ ಮೊಹಮ್ಮದ್ ಅಶ್ರಫ್ ಅರೇಬಿಕ್ ಟೀಚರ್ ಆಗಿ ಕೆಲಸ ಮಾಡುತ್ತಾನೆ. ಐಷಾರಾಮಿ ಜೀವನದ ಆಸೆಗೆ ಬಿದ್ದು ಈತ ಡ್ರಗ್ ವ್ಯಾಪಾರಕ್ಕೆ ಇಳಿದಿದ್ದನು. ಗೋವಾ ಮೂಲವಾಗಿಟ್ಟುಕೊಂಡು ಡ್ರಗ್ಸ್ ವ್ಯಾಪಾರ ಮಾಡುವ ನೈಜೀರಿಯಾದ ಜೂಡ್ ಅಲಿಯಾಸ್ ಕ್ರಿಸ್ ಎಂಬಾತನೊಂದಿಗೆ ಈತ ಸಂಪರ್ಕ ಸಾಧಿಸಿದ್ದ. ಆತನಿಂದ ಗೋವಾದಲ್ಲಿ ಡ್ರಗ್ಸ್ ಖರೀದಿಸಿ ತರುತ್ತಿದ್ದ ಈತ ಅದನ್ನು ಗೋವಾದಲ್ಲಿ ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರುತ್ತಿದ್ದ.
ಆರೋಪಿಯು ಬಂಧಿತನಾಗಿ ಈ ವರ್ಷ ಜೂನ್‌ನಲ್ಲಿ ಬಿಡುಗಡೆಯಾಗಿದ್ದ. ಆದರೂ ತನ್ನ ನಡವಳಿಕೆಯನ್ನು ಬದಲಾಯಿಸದೆ ಮತ್ತೆ ಡ್ರಗ್ಸ್ ವ್ಯವಹಾರ ಆರಂಭಿಸಿದ್ದ. ಅಪಾರ ಪ್ರಮಾಣದ ಕೊಕೇನ್ ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದ. ಪೊಲೀಸರು ಈತನ ಮೇಲೆ ಕಣ್ಣಿಟ್ಟಿದ್ದು ಇಕ್ರಿಸ್ಯಾಟ್ ಬಳಿ ಬಂಧಿಸಿದ್ದಾರೆ. ಆರೋಪಿ ಅಶ್ರಫ್ ಬೇಗ್ ಮತ್ತು ಡ್ರಗ್ಸ್ ಪೂರೈಕೆದಾರ ಜೂಡ್ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನು ಓದಿ:ವಂಚನೆ ಪ್ರಕರಣ: ₹171.74 ಕೋಟಿ ದಂಡ ವಿಧಿಸಿದ ಸಿಬಿಐ ಕೋರ್ಟ್