ಕಾಮರೆಡ್ಡಿ, ತೆಲಂಗಾಣ: ಮುದ್ದಾಗಿರುವ ಪುಟ್ಟ ಮಕ್ಕಳು. ಅಣ್ಣನಿಗೆ ನಾಲ್ಕು ವರ್ಷ, ತಂಗಿಗೆ ಆರು ತಿಂಗಳ ವಯಸ್ಸು. ಅಮ್ಮ ಜೊತೆಗಿದ್ದರೆ ಅವರಿಗೆ ಬೇರೆ ಪ್ರಪಂಚ ಬೇಕಾಗಿಲ್ಲ. ಅಂತಹ ಇಬ್ಬರು ಮಕ್ಕಳನ್ನು ಹೆತ್ತ ತಾಯಿಯೇ ನದಿಗೆ ಎಸೆದ ಹೃದಯವಿದ್ರಾವಕ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
ಇಬ್ಬರು ಮುದ್ದಾದ ಮಕ್ಕಳನ್ನು ತಾಯಿಯೇ ನದಿಗೆ ಎಸೆದಿದ್ದಾಳೆ ಎಂಬ ಆರೋಪವೊಂದು ಕೇಳಿಬಂದಿದೆ. ಮಕ್ಕಳನ್ನು ನದಿಗೆ ಎಸೆದ ಕೂಡಲೇ ಸ್ಥಳೀಯರು ನೀರಿಗೆ ಹಾರಿದ್ದಾರೆ. ಸ್ಥಳೀಯರು ನದಿಯಿಂದ ಮಕ್ಕಳನ್ನು ಹೊರತೆಗೆದು ಉಳಿಸಲು ಎಷ್ಟೇ ಪ್ರಯತ್ನಿಸಿದ್ರೂ ಪ್ರಯೋಜನವಾಗಲಿಲ್ಲ. ಈ ಘಟನೆ ಕಾಮರೆಡ್ಡಿ ಜಿಲ್ಲೆಯ ಬನ್ಸುವಾಡದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಪೊಲೀಸರ ಪ್ರಕಾರ, ನಿಜಾಮಾಬಾದ್ ಜಿಲ್ಲೆಯ ಚಕ್ರನಗರತಾಂಡಾದ ಅರುಣಾ ಮತ್ತು ಮಹಾರಾಷ್ಟ್ರದ ಉದಗೀರ್‌ನ ಮೋಹನ್ ದಂಪತಿಗೆ ಯುವರಾಜ್ ಎಂಬ ಪುತ್ರ ಹಾಗೂ ಅನೋನ್ಯ ಎಂಬ ಪುತ್ರಿ ಇದ್ದಾರೆ. ಕಳೆದ ಕೆಲವು ದಿನಗಳಿಂದ ಪತಿ - ಪತ್ನಿಯ ನಡುವೆ ಜಗಳ ನಡೆಯುತ್ತಿತ್ತು. ಇತ್ತೀಚೆಗಷ್ಟೇ ಅರುಣಾಳ ಪತಿ ಉದಗೀರ್ಗೆ ಕರೆ ಮಾಡಿ ಬರಲು ಹೇಳಿದ್ದರು.
ಸೋಮವಾರ ಸಂಜೆ ನಾಲ್ಕು ಗಂಟೆ ಸುಮಾರಿಗೆ ಅರುಣಾ ತಮ್ಮ ತಾಯಿ ಊರು ಬಿಟ್ಟು ಉದಗೀರ್ಗೆ ಪ್ರಯಾಣ ಬೆಳೆಸಿದ್ದಾರೆ. ಅರುಣಾಳಿಗೆ ಏನಾಯ್ತೋ ಏನೋ ತಿಳಿಯಲಿಲ್ಲ.. ಬಾನ್ಸುವಾಡದಲ್ಲಿ ಇಳಿದು ಇಬ್ಬರು ಮಕ್ಕಳನ್ನು ಕರೆದುಕೊಂಡು ನದಿ ಹತ್ತಿರ ಹೋಗಿದ್ದಾಳೆ. ಬಳಿಕ ಇಬ್ಬರು ಮಕ್ಕಳನ್ನು ನದಿಗೆ ಎಸೆದಿದ್ದಾಳೆ ಎನ್ನಲಾಗಿದೆ. ಇದನ್ನು ಕಂಡ ಸ್ಥಳೀಯರು ಕೂಡಲೇ ಮಕ್ಕಳ ಜೀವವನ್ನು ಉಳಿಸಲು ನದಿಗೆ ಹಾರಿದ್ದಾರೆ. ಹರಸಾಹಸಪಟ್ಟು ಸ್ಥಳೀಯರು ಮಕ್ಕಳನ್ನು ನದಿಯಿಂದ ಹೊರಕ್ಕೆ ತಂದು ಆಸ್ಪತ್ರೆಗೆ ಕರೆದೊಯ್ದರು. ಅಷ್ಟೋತ್ತಿಗಾಗಲೇ ಮmಕ್ಲಳಿಬ್ಬರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮಾಹಿತಿ ಪಡೆದ ಡಿಎಸ್ಪಿ ಜಗನ್ನಾಥರೆಡ್ಡಿ, ಸಿಐ ಮಹೇಂದರ್ ರೆಡ್ಡಿ ಆಸ್ಪತ್ರೆಗೆ ತೆರಳಿ ತನಿಖೆ ಕೈಗೊಂಡರು. ನಿಜಾಮಾಬಾದ್‌ನಿಂದ ಆಟೋದಲ್ಲಿ ಬರುತ್ತಿದ್ದಾಗ ಚಾಲಕ ತನ್ನ ಮೇಲೆ ದೌರ್ಜನ್ಯ ನಡೆಸಿ ಮಕ್ಕಳನ್ನು ನದಿಗೆ ಎಸೆದು ಓಡಿ ಹೋಗಿದ್ದಾನೆ ಎಂದು ಅರುಣಾ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ನದಿ ಬಳಿ ಆಟೋ ಅಥವಾ ಚಾಲಕ ಇಲ್ಲದಿರುವುದರಿಂದ ಹಲವು ಅನುಮಾನಗಳು ವ್ಯಕ್ತವಾಗಿವೆ. ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಡಿಎಸ್ಪಿ ಜಗನ್ನಾಥ ರೆಡ್ಡಿ ತಿಳಿಸಿದ್ದಾರೆ.
ಓದಿ: ಸ್ಮರಣೀಯ ವಿವಾಹ ಕಾರ್ಯಕ್ರಮ.. ನವಜೋಡಿ ಸೇರಿ 60 ಮಂದಿ ಅಂಗಾಂಗ ದಾನಕ್ಕೆ ಪ್ರತಿಜ್ಞೆಗೆ ಸಜ್ಜು