ಬೆಂಗಳೂರು: ಕರ್ನಾಟಕ ಗೃಹ ಮಂಡಳಿ ಹಿರಿಯ ಅಧಿಕಾರಿ ಎಂದು ಹೆಸರು ಹೇಳಿಕೊಂಡು ಸೈಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪ ಪ್ರಕರಣವೊಂದು ನಗರದಲ್ಲಿ ಬೆಳಕಿಗೆ ಬಂದಿದೆ.
ಸಾಹಸ ನಿರ್ದೇಶಕ ರವಿವರ್ಮಾ, ಹಿರಿಯ ನಟ ಶರತ್ ಲೋಹಿತಾಶ್ವ ಸೇರಿದಂತೆ ಹತ್ತಾರು ಜನರಿಗೆ ವಂಚಿಸಿ ಬಂಧನಕ್ಕೆ ಒಳಗಾಗಿರುವ ನಿರ್ಮಾಪಕ ಶ್ರೀಧರ್ ಆಲಿಯಾಸ್ ಹರಿಪ್ರಸಾದ್ ಇದೀಗ ಸಂಗೀತ ನಿರ್ದೇಶಕ ಡಿ.ಪ್ರವೀಣ್ ರಾವ್ಗೆ ನಿವೇಶನ ಕೊಡಿಸುವುದಾಗಿ 94 ಲಕ್ಷ ರೂಪಾಯಿ ವಂಚಿಸಿರುವ ಬಗ್ಗೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
'ಕಲಿಯುಗದ ಕಂಸ' ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ಆರೋಪಿ ಶ್ರೀಧರ್, ‘ರಾಜನಿಗೂ-ರಾಣಿಗೂ’ ಎಂಬ ಸಿನಿಮಾದ ನಿರ್ಮಾಪಕರಾಗಿದ್ದರು. ಸಿನಿಮಾ ಬಿಡುಗಡೆ ಹಂತದಲ್ಲಿರುವಾಗಲೇ ಕೆಹೆಚ್ಬಿ ಅಧಿಕಾರಿ ಎಂದು ಹೇಳಿಕೊಂಡು ಸೈಟ್ ಕೊಡಿಸುವುದಾಗಿ ನಂಬಿಸಿ ಅನೇಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಎನ್ನಲಾಗ್ತಿದೆ.
2019 ರಲ್ಲಿ ಸಂಗೀತ ನಿರ್ದೇಶಕ ಪ್ರವೀಣ್ ರಾವ್ ಎಂಬುವರಿಗೆ ಹೌಸಿಂಗ್ ಬೋರ್ಡ್‌ನಲ್ಲಿ 4 ನಿವೇಶನ ಕೊಡಿಸುವುದಾಗಿ ನಂಬಿಸಿ, ನಗದು ಹಾಗೂ ಚೆಕ್ ರೂಪದಲ್ಲಿ ಒಟ್ಟು 94 ಲಕ್ಷ ರೂ. ಪಡೆದಿದ್ದ. 2 ವರ್ಷವಾದ್ರು ಸೈಟ್ ಕೊಡಿಸದೇ ಹಣವನ್ನೂ ಹಿಂದಿರುಗಿಸದೆ ಸತಾಯಿಸುತ್ತಿದ್ದ ಎಂದು ಹೇಳಲಾಗ್ತಿದೆ.
ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಗೆ ಪ್ರವೀಣ್ ರಾವ್ ದೂರು ನೀಡಿದ್ದು, ಸದ್ಯ ಕುಮಾರಸ್ವಾಮಿ ಲೇಔಟ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.