ಮಲಪ್ಪುರಂ(ಕೇರಳ): 55 ವರ್ಷದ ಪಾಪಿ ತಂದೆಗೆ ಇಲ್ಲಿನ ಪೋಕ್ಸೋ ವಿಶೇಷ ಕೋರ್ಟ್ 17 ವರ್ಷ ಜೈಲು ಶಿಕ್ಷೆ ಹಾಗೂ 3 ಲಕ್ಷ ರೂಪಾಯಿ ದಂಡ ವಿಧಿಸಿ, ಮಹತ್ವದ ಆದೇಶ ಹೊರಡಿಸಿದೆ. ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ತಂದೆಯೊಬ್ಬರು ಸುಮಾರು ಎರಡು ವರ್ಷಗಳ ಕಾಲ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ಹೊರಬಿದ್ದಿದೆ.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕೋರ್ಟ್ ಈ ಆದೇಶ ಹೊರಡಿಸಿದ್ದು, 16 ಹಾಗೂ 17 ವರ್ಷದ ಹೆಣ್ಣು ಮಕ್ಕಳ ಮೇಲೆ ತಂದೆ ಎರಡು ವರ್ಷಗಳ ಕಾಲ ನಿರಂತರವಾಗಿ ಕಿರುಕುಳ ನೀಡಿದ್ದಾನೆ. ಜೊತೆಗೆ ಅವರಿಗೆ ಬೆದರಿಕೆ ನೀಡಿ, ಮನೆಯೊಳಗೆ ಕೂಡಿ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ದೂರು ದಾಖಲಾಗಿದ್ದವು. ಹೆಣ್ಣು ಮಕ್ಕಳ ತಾಯಿ ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿದ್ದರು.
ಇದನ್ನೂ ಓದಿರಿ: ಹಾರ್ದಿಕ್ ಪಾಂಡ್ಯಾ ಕೈಯಲ್ಲಿ 5 ಕೋಟಿ ರೂ. ಮೌಲ್ಯದ ವಾಚ್.. ಅಂತಹದ್ದು ಏನಿದೆ ಅದರಲ್ಲಿ!?
ಪ್ರಕರಣ ದಾಖಲಾಗುತ್ತಿದ್ದಂತೆ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಂ ದೇವಾಸ್ ತನಿಖೆ ನಡೆಸಿ, ಎರಡು ಪ್ರಕರಣಗಳಿಂದ ಪ್ರತ್ಯೇಕ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. ಇದರ ಆಧಾರದ ಮೇಲೆ ಇಂದು ಅಂತಿಮ ತೀರ್ಪು ನೀಡಿರುವ ಕೋರ್ಟ್, ಸ್ವತಃ ಹೆಣ್ಣು ಮಕ್ಕಳ ವಿಚಾರದಲ್ಲೂ ತಂದೆ ಕರುಣೆ ತೋರದೇ ಈ ರೀತಿಯಾಗಿ ನಡೆದುಕೊಂಡಿರುವುದು ನಿಜಕ್ಕೂ ಆಘಾತಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದೆ. ಪೋಕ್ಸೋ ವಿಶೇಷ ಕೋರ್ಟ್ನ ನ್ಯಾಯಮೂರ್ತಿ ಪಿ.ಟಿ ಪ್ರಕಾಶನ್ ತೀರ್ಪು ಓದಿದ್ದು, ಆರೋಪಿ ತಂದೆ, ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ, ಬೆದರಿಕೆ ಸೇರಿದಂತೆ ಬಲವಂತವಾಗಿ ಲೈಂಗಿಕ ಕಿರುಕುಳಕ್ಕೆ ಬಳಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ.