ಚಿಕ್ಕೋಡಿ(ಬೆಳಗಾವಿ) : ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಮಗು ಮೃತಪಟ್ಟಿದೆ. ನಿನ್ನೆ ತೋಟದಲ್ಲಿನ ಕೊಳವೆ ಬಾವಿಗೆ ಮಗು ಬಿದ್ದಿರುವುದು ಇಂದು ಸಂಜೆಯಷ್ಟೇ ಪತ್ತೆಯಾಗಿತ್ತು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಬೆಳಗಾವಿ ಜಿಲ್ಲಾಡಳಿತ, ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಅಗ್ನಿಶಾಮಕ ದಳ ಹಾಗೂ ಪೊಲೀಸರ ನೆರವಿನಿಂದ ಶರತ್ ಹಸರೆ ಮೃತದೇಹವನ್ನು ಮೇಲೆ ಎತ್ತಲಾಗಿದೆ.
ಮಗುವಿನ ತಂದೆ ಸಿದ್ದಪ್ಪ ನಿನ್ನೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ತನ್ನ ಮಗುವನ್ನು ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ಸದ್ಯ ಈಗ ಮಗು ಕೊಳವೆ ಬಾವಿಯಲ್ಲಿ ಪತ್ತೆಯಾಗಿದೆ.
'ತಂದೆಯಿಂದಲೇ ಮಗುವಿನ ಕೊಲೆ'!: 2 ವರ್ಷದ ಮಗು ಕೊಳವೆ ಬಾವಿಗೆ ಬಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಶರತ್ ಹಸರೆಯನ್ನು ಆತನ ತಂದೆ ಸಿದ್ದಪ್ಪನೇ ಕೊಲೆ ಮಾಡಿರುವುದಾಗಿ ಮೃತ ಮಗುವಿನ ಅಜ್ಜಿ ಸರಸ್ವತಿ ಗಂಭೀರ ಆರೋಪ ಮಾಡಿದ್ದಾರೆ.
ಮೃತ ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ರಾಯಭಾಗ ಸಮುದಾಯ ಆಸ್ಪತ್ರೆಗೆ ರವಾನಿಸಲಾಗಿದೆ. ಇತ್ತ ಮಗನನ್ನು ಕಳೆದುಕೊಂಡ ತಾಯಿ ಆಕ್ರಂದನ ಮುಗಿಲುಮುಟ್ಟಿದೆ. ಕೌಟುಂಬಿಕ ಕಲಹದಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆ ಬಗ್ಗೆ ಮಾಹಿತಿ ನೀಡಿದ ಅಗ್ನಿಶಾಮಕ ಅಧಿಕಾರಿ ಶಶಿಧರ್, ಸಂಜೆ 5.30ಕ್ಕೆ ಫೋನ್ ಕರೆ ಬಂದಿತ್ತು. ರಕ್ಷಣಾ ಕಾರ್ಯಕ್ಕೆ ಬಂದಾಗ ಮಗು ಕೆಸಿಂಗ್‌ನಲ್ಲಿ ಬಿದ್ದಿರುವುದು ತಿಳಿಯಿತು. ಸುಮಾರು 6 ರಿಂದ 9 ಅಡಿ ಆಳದಲ್ಲಿ ಬಿದ್ದಿದ್ದ ಕಾರಣ ಮಗು ಕಣ್ಣಿಗೆ ಕಾಣಿಸುತ್ತಿತ್ತು. ಕಾರ್ಯಾಚರಣೆ ಮೂಲಕ ಹೊರ ತೆಗೆದು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಿದರು.