ತುಮಕೂರು: ಎಟಿಎಂ ಕಾರ್ಡ್ಗಳ ದತ್ತಾಂಶವನ್ನು ಗ್ರಾಹಕರಿಂದ ಕದ್ದು ನಕಲಿ ಎಟಿಎಂ ಕಾರ್ಡ್ಗಳನ್ನು ತಯಾರಿಸಿ ಗ್ರಾಹಕರ ಖಾತೆಯಿಂದ ಹಣ ತೆಗೆದು ವಂಚಿಸುತ್ತಿದ್ದ ಇಬ್ಬರು ಅಂತರ್ ರಾಜ್ಯ ಖದೀಮರನ್ನು ತುಮಕೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಪ್ರತಾಪಘರ್ ಜಿಲ್ಲೆಯ ನೋಬೊಷ್ಟಾ ಗ್ರಾಮದ ಬ್ರಿಜ್ ಬನ್ ಸರೋಜ್, ಉತ್ತರ ಪ್ರದೇಶದ ಪ್ರತಾಪಘರ್ ಜಿಲ್ಲೆಯ ನೋಬೊಷ್ಟಾ ಗ್ರಾಮದ ಹರಿಲಾಲ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ನಾಲ್ವರು ಪರಾರಿಯಾಗಿದ್ದಾರೆ. ಬಂಧಿತರಿಂದ 2 ಲ್ಯಾಪ್ಟಾಪ್, 19 ವಿವಿಧ ಎಟಿಎಂ ಕಾರ್ಡ್ಗಳು ಹಾಗೂ ತುಮಕೂರಿನಲ್ಲಿ ಎಟಿಎಂ ಗ್ರಾಹಕರಿಗೆ ವಂಚಿಸಿದ್ದ 53 ಸಾವಿರ. ರೂಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರು ಬರೋಬ್ಬರಿ 85 ಕಡೆ ಎಟಿಎಂಗಳಲ್ಲಿ ಹಣ ದೋಚಿದ್ದರು ಎಂದು ತಿಳಿದುಬಂದಿದೆ.
ಜಿಲ್ಲೆಯ ಅರಸೀಕೆರೆ, ತುಮಕೂರು, ಶಿರಾ ಪೊಲೀಸ್ ಠಾಣೆಗಳಲ್ಲಿ ಈ ಸಂಬಂಧ ಪ್ರಕರಣಗಳು ದಾಖಲಾಗಿದ್ದವು. ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ, ರಾಜ್ಯದ 85ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಈ ತಂಡ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಕಲಬುರಗಿಯಲ್ಲಿ 6 ಕಡೆ, ರಾಯಚೂರಿನಲ್ಲಿ 4, ಲಿಂಗಸೂರಿನಲ್ಲಿ 6, ಗಡ್ಡಿಯಲ್ಲಿ 4, ಕುಷ್ಟಗಿಯಲ್ಲಿ 5, ಸಿಂಗನೂರಿನಲ್ಲಿ 3, ಬೆಳಗಾವಿಯಲ್ಲಿ 3, ಕುಡ್ಲದಲ್ಲಿ 2, ಯಾದಗಿರಿಯಲ್ಲಿ 4, ಚಿತ್ರದುರ್ಗದಲ್ಲಿ 4, ದಾವಣಗೆರೆಯಲ್ಲಿ 5, ಚಿಕ್ಕೋಡಿಯಲ್ಲಿ 3, ಹಾವೇರಿಯಲ್ಲಿ 16, ಭದ್ರಾವತಿಯಲ್ಲಿ 4, ಶಿವಮೊಗ್ಗದಲ್ಲಿ 4, ತರೀಕೆರೆಯಲ್ಲಿ 3, ಕಡೂರಿನಲ್ಲಿ 2, ರಾಣೆಬೆನ್ನೂರಿನಲ್ಲಿ 3, ಧಾರವಾಡದಲ್ಲಿ 4, ಹಿರಿಯೂರಿನಲ್ಲಿ 4, ತುಮಕೂರಿನಲ್ಲಿ 4 ಕಡೆಗಳಲ್ಲಿ ವಂಚನೆ ನಡೆಸಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ.