ತುಮಕೂರು: ತುಮಕೂರಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಯುವತಿಯರಿಬ್ಬರು ವಿವಾಹವಾಗಲು ಅವಕಾಶ ಮಾಡಿಕೊಡುವಂತೆ ಕೋರಿ ಪೊಲೀಸರ ಮೊರೆ ಹೋಗಿದ್ದರು. ಆದರೆ ಪೊಲೀಸರು ಅವಕಾಶ ಮಾಡಿಕೊಟ್ಟಿಲ್ಲ ಮತ್ತು ವಿಷಯ ತಿಳಿದ ಪೋಷಕರು, ಯುವತಿಯರನ್ನು ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ನಗರದ ಡಿಪ್ಲೋಮೋ ಕಾಲೇಜೊಂದರಲ್ಲಿ ಓದುತ್ತಿರುವ 22 ವರ್ಷದ ಈ ಇಬ್ಬರು ಯುವತಿಯರು ಸಹಪಾಠಿಗಳಾಗಿದ್ದು, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಪರಸ್ಪರ ಪ್ರೀತಿಸುತ್ತಿದ್ದರಂತೆ. ಓರ್ವ ಯುವತಿ ತುಮಕೂರು ಮತ್ತು ಇನ್ನೋರ್ವ ಯವತಿ ಪಾವಗಡ ತಾಲೂಕಿನವರಾಗಿದ್ದಾರೆ. ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ವಿವಾಹವಾಗಲು ನಿರ್ಧಾರ ಮಾಡಿದ್ದರಂತೆ. ಅಂತೆಯೇ ವಿಷಯವನ್ನು ಪೋಷಕರಿಗೆ ತಿಳಿಸಿದ್ದರು. ಆದ್ರೆ ಇದಕ್ಕೆ ಯುವತಿಯ ಮನೆಯವರು ಒಪ್ಪದ ಕಾರಣ ಯುವತಿಯರು ನಗರದ ತಿಲಕ್ ಪಾರ್ಕ್ ಪೊಲೀಸರ ಮೊರೆ ಹೋಗಿದ್ದರಂತೆ. ಪೊಲೀಸರು ಮದುವೆ ನಿರಾಕರಿಸಿದ್ದರಿಂದ ಇಬ್ಬರೂ ನಗರದಿಂದ ಪರಾರಿಯಾಗಿದ್ದರು ಎಂದು ಹೇಳಲಾಗುತ್ತಿದೆ.
ಆದರೆ, ಗುರುವಾರ ಇಬ್ಬರೂ ನಗರಕ್ಕೆ ವಾಪಸ್ ಬಂದು ಮದುವೆ ಸಿದ್ಧತೆಯಲ್ಲಿದ್ದಾಗ ವಿಷಯ ತಿಳಿದು ಪೋಷಕರು ಮತ್ತು ಪೊಲೀಸರು ಸ್ಥಳಕ್ಕೆ ಬಂದು, ಯುವತಿಯರ ಮನವೊಲಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಕೇರಳದಲ್ಲಿ ಪ್ರೇಮಿಗಳ ದಿನದಂದು ಸಪ್ತಪದಿ ತುಳಿದ ಸಲಿಂಗಿ ಜೋಡಿ.. ದೇಶದಲ್ಲಿ ಇದೇ ಮೊದಲು