ತುಮಕೂರು : ಆರೋಪಿಗಳನ್ನು ಬಂಧಿಸುವಂತೆ ತಮ್ಮ ಕಾರಿನಲ್ಲಿ ದೂರುದಾರರನ್ನು ಪೊಲೀಸರ ಬಳಿ ಕಳಿಸಿಕೊಟ್ಟಿದ್ದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರ ವಿಭಿನ್ನ ನಡೆಗೆ ಬೆಚ್ಚಿಬಿದ್ದ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತುರುವೇಕೆರೆ ತಾಲೂಕಿನ ದಂಡಿನಶಿವರ ಠಾಣಾ ವ್ಯಾಪ್ತಿಯ ಕೋಡಿಹಳ್ಳಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಕೆಲ ತಿಂಗಳ ಹಿಂದೆ ಗಲಾಟೆ ನಡೆದಿತ್ತು. ಈ ಸಂಬಂಧ ಆರೋಪಿ ಚಂದನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ದೂರುದಾರ ನಾಗೇಂದ್ರಪ್ಪ ಎಂಬುವರ ಮೇಲೆ ಆರೋಪಿಗಳಾದ ಪ್ರಕಾಶ್ ಮತ್ತು ಚಂದನ್ ತೀವ್ರತರವಾಗಿ ಹಲ್ಲೆ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಲು ಮೀನಾಮೇಷ ಎಣಿಸುತ್ತಿದ್ದರು. ಹೀಗಾಗಿ, ನಾಗೇಂದ್ರಪ್ಪ ದಂಡಿನಶಿವರ ಪೊಲೀಸರ ವಿರುದ್ಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಅಲ್ಲದೆ ಆರೋಪಿಯನ್ನು ಬಂಧಿಸಲು ಕಾರು ತರುವಂತೆ ಪೊಲೀಸರು ಹೇಳುತ್ತಿರುವುದಾಗಿ ದೂರುದಾರ ನಾಗೇಂದ್ರಪ್ಪ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಅವಲತ್ತುಕೊಂಡಿದ್ದರು.
ಇದಕ್ಕೆ ಸ್ಪಂದಿಸಿದ ಪೊಲೀಸ್ ವರಿಷ್ಠಾಧಿಕಾರಿ ತಮ್ಮ ಕಾರನ್ನು ದೂರುದಾರನೊಂದಿಗೆ ಕಳುಹಿಸಿಕೊಟ್ಟು ದಂಡಿನಶಿವರ ಪೊಲೀಸ್ ಠಾಣೆಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಎಚ್ಚೆತ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಈ ನಡೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಕೂಡ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ದೂರುದಾರರನ್ನು ತಮ್ಮ ಕಾರಿನಲ್ಲೇ ಇನ್ಸ್ಪೆಕ್ಟರ್ ಕಚೇರಿಗೆ ಕಳುಹಿಸಿಕೊಟ್ಟ ಎಸ್ಪಿ.. ಎಸ್ಐ ಕಕ್ಕಾಬಿಕ್ಕಿ!