ತುಮಕೂರು: ಕಿಸಾನ್ ಸಮ್ಮಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಇಂದು ತುಮಕೂರಿನ ಸಿದ್ದಗಂಗಾ ಮಠಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಮಠದ ವತಿಯಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ನಮ್ಮ ಸಂಪ್ರದಾಯದಂತೆ ಊಟಕ್ಕೆ ಅನ್ನ-ಸಾರು, ಹೋಳಿಗೆ, ಹಣ್ಣು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.
ಪ್ರಧಾನಿ ಮೋದಿ ಅವರ ಭದ್ರತೆ ದೃಷ್ಟಿಯಿಂದ ಸಾರ್ವಜನಿಕರು ಹಾಗೂ ಭಕ್ತರು ಮಠದ ಆವರಣಕ್ಕೆ ಬರಲು ಕಷ್ಟವಾಗಬಹುದು. ಹೀಗಾಗಿ ಸಹಕರಿಸುವಂತೆ ಕೂಡ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ರು.
ಮೋದಿಯವರು ಮಠಕ್ಕೆ ಆಗಮಿಸಿದ ಬಳಿಕ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆಯಲಿದ್ದಾರೆ. ನಂತರ ಮಠದ ಭೇಟಿಯ ನೆನಪಿಗೆ ಬಿಲ್ವಪತ್ರೆ ಸಸಿ ನೆಡಲಿದ್ದಾರೆ ಎಂದು ತಿಳಿಸಿದರು.