ತುಮಕೂರು: ಜಿಲ್ಲೆಯ ಗುಬ್ಬಿ, ಕುಣಿಗಲ್, ತಾಲೂಕಿನ ಗ್ರಾಮೀಣ ಭಾಗದಲ್ಲಿ ಬೆಂಬಿಡದೆ ಕಾಡುತ್ತಿರುವ ಚಿರತೆಗಳನ್ನು ಸೆರೆಹಿಡಿಯಲು ಪ್ರಮುಖವಾಗಿ ಅಡ್ಡಿಯಾಗಿರುವ ಪೊದೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ.
ಚಿರತೆಗಳು ಪೊದೆಗಳಲ್ಲಿ ಅಡಗಿ ಕುಳಿತು ಹೊಂಚು ಹಾಕಿ ಜನರ ಮೇಲೆ ದಾಳಿ ನಡೆಸುತ್ತಿವೆ. ಈಗಾಗಲೇ ಎರಡು ಸಾಕಾನೆಗಳನ್ನು ಬಳಸಿಕೊಂಡು ಚಿರತೆ ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೀಗಿದ್ದರೂ ಚಿರತೆಗಳು ಕಣ್ಣಿಗೆ ಬೀಳುತ್ತಿಲ್ಲ. ಆದ್ರೆ ಗ್ರಾಮಗಳ ಖಾಸಗಿ ಜಮೀನು ಸೇರಿದಂತೆ ಸರ್ಕಾರಿ ಗೋಮಾಳಗಳಲ್ಲಿ ಬೆಳೆದು ನಿಂತಿರುವ ಪೊದೆಗಳೇ ಚಿರತೆಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಹಕಾರಿಯಾಗಿವೆ. ಇಂತಹ ಪೊದೆಗಳು ಮತ್ತು ಗಿಡಗಂಟಿಗಳನ್ನು ತೆರವುಗೊಳಿಸುವಂತೆ ಈಗಾಗಲೇ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿತ್ತು.
ಆದ್ರೆ ಸ್ಥಳೀಯ ಗ್ರಾಮ ಪಂಚಾಯತ್ಗಳು ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಚಿರತೆ ಹೆಚ್ಚಾಗಿ ಓಡಾಡುತ್ತಿರುವ ತುಮಕೂರು ತಾಲೂಕಿನ ಹೆಬ್ಬೂರು ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಅರಣ್ಯ ಇಲಾಖೆಯೇ ಮುಂದೆ ನಿಂತು ಪೊದೆಗಳನ್ನು ತೆರವುಗೊಳಿಸುತ್ತಿದೆ. ಜೆಸಿಬಿಗಳನ್ನು ಬಳಸಿ ಪೊದೆಗಳನ್ನು ನಾಶಪಡಿಸಲಾಗುತ್ತಿದೆ. ಈಗಾಗಲೇ ಸುಮಾರು 7 ರಿಂದ 8 ಚಿರತೆಗಳು ಈ ಭಾಗದಲ್ಲಿ ಓಡಾಡುತ್ತಿರೋದು ಇಲ್ಲಿ ಅಳವಡಿಸಿರೋ ಅರಣ್ಯ ಇಲಾಖೆ ಟ್ರ್ಯಾಪ್ ಕ್ಯಾಮರಾದಲ್ಲಿ ದಾಖಲಾಗಿದೆ.