ತುಮಕೂರು: ಅನಧಿಕೃತವಾಗಿ ಬಿಸ್ಲೇರಿ ನೀರು ತಯಾರು ಮಾಡುತ್ತಿದ್ದ ಘಟಕದ ಮೇಲೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿ ಅನೇಕ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡಿದೆ. ಈ ಘಟನೆ ಮಧುಗಿರಿ ತಾಲೂಕಿನ ಕಸಬಾ ಕೆರೆಗಳ ಪಾಳ್ಯ ರಸ್ತೆಯಲ್ಲಿ ನಡೆದಿದೆ.
ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಐಎಸ್ಐ ಮಾರ್ಕ್ ಇಲ್ಲದೆ ಬಿಸ್ಲೇರಿ ನೀರು ತಯಾರಿಸಲಾಗುತ್ತಿದೆ ಎಂಬ ದೂರು ಕೇಳಿಬಂದಿದ್ದು ಮಧುಗಿರಿ ತಹಶೀಲ್ದಾರ್ ಅರುಂಧತಿ ಹಾಗೂ ಆಹಾರ ಇಲಾಖೆ ಶಿರಸ್ತೆದಾರ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಅನಧಿಕೃತವಾಗಿ ಘಟಕ ನಡೆಸಲಾಗುತ್ತಿದೆ ಎಂಬುದು ಖಚಿತವಾಗಿದೆ.
ಈ ಕುರಿತು ಮಾಹಿತಿ ನೀಡಿದ ತಹಶೀಲ್ದಾರ್ ಅರುಂಧತಿ, 'ದಾಳಿ ವೇಳೆ ಬಿಸ್ಲೇರಿ ಬಾಟಲಿ ಸಿಕ್ಕಿದೆ. ಲೇಬಲ್ ಸಿಕ್ಕಿಲ್ಲ. ಘಟಕಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಐಎಸ್ಐ ತೆಗೆದುಕೊಂಡಿಲ್ಲ ಎಂಬುದು ಖಚಿತವಾದರೆ ಕ್ರಮ ತೆಗೆದುಕೊಳ್ಳಲಾಗುವುದು' ಎಂದರು.
ಇದೇ ವೇಳೆ, 'ನೀರು ತಯಾರು ಘಟಕ ಸ್ಥಾಪಿಸಲು ಅರ್ಜಿ ಸಲ್ಲಿಸಲಾಗಿದೆ. ಅನುಮತಿಗಾಗಿ ಕಾಯುತ್ತಿದ್ದೇವೆ' ಎಂದು ಘಟಕದ ಮಾಲೀಕ ತಿಳಿಸಿದರು.