ತುಮಕೂರು: ಲಂಚ ತೆಗೆದುಕೊಂಡು ಕೆಲಸ ಮಾಡುತ್ತೀರಾ ಎಂಬ ಶಾಸಕ ಮಾಧುಸ್ವಾಮಿ ಅವರ ಗಂಭೀರ ಆರೋಪಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯೊಬ್ಬರು, ಈ ರೀತಿ ಸುಳ್ಳು ಆರೋಪ ಮಾಡಿದರೆ ಕೆಲಸ ಬಿಡುತ್ತೇನೆ ಎಂದು ಹೇಳಿದ ಘಟನೆ ಜಿಲ್ಲಾ ಪಂಚಾಯಿತಿ ತ್ರೈಮಾಸಿಕ ಸಭೆಯಲ್ಲಿ ನಡೆಯಿತು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಾದ ಮಾಧುಸ್ವಾಮಿ, ಮಸಾಲೆ ಜಯರಾಮ್, ಬಿ ಸಿ ನಾಗೇಶ್ ಅವರು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣಪ್ಪ ವಿರುದ್ಧ ಹರಿಹಾಯ್ದರು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹಕಾರ ನೀಡುತ್ತಿಲ್ಲ. ಕುಂಟು ನೆಪವೊಡ್ಡಿ ಬೇಜವಾಬ್ದಾರಿತನ ತೋರಿಸಿದ್ದಾರೆ ಮತ್ತು ಲಂಚ ತೆಗೆದುಕೊಂಡು ಕೆಲಸ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೃಷ್ಣಪ್ಪ, ನನ್ನ ಮೇಲೆ ಯಾಕೆ ಸುಮ್ಮನೆ ಆರೋಪ ಮಾಡುತ್ತೀರಾ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಯಾವುದೇ ಲಂಚ ಪಡೆದಿಲ್ಲ. ಹೀಗೇ ಆದರೆ, ಕೆಲಸವನ್ನು ಬಿಡುತ್ತೇನೆ ಎಂದು ಏರು ಧ್ವನಿಯಲ್ಲಿ ಹೇಳಿದರು.
ಈ ನಡುವೆ ಮಧ್ಯೆ ಪ್ರವೇಶಿಸಿದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಅಲ್ಲದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಹೇಳುವ ಮೂಲಕ ಸಭೆಯನ್ನು ತಹಬದಿಗೆ ತಂದರು.