ತುಮಕೂರು: ಅವೈಜ್ಞಾನಿಕ ಜಿಎಸ್ಟಿ ಅನುಷ್ಠಾನಗೊಂಡಿದ್ದು, ಇದರಿಂದಾಗಿ ವ್ಯಾಪಾರ ಮತ್ತು ವೃತ್ತಿ ನಿರತರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ಸಿಜಿಎಸ್ಟಿ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಲಾಯಿತು.
ಹಿರಿಯ ತೆರಿಗೆ ಸಲಹೆಗಾರರಾದ ಎಸ್.ಪ್ರಕಾಶ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ತೆರಿಗೆ ಸಲಹೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರಸ್ತುತ ತೆರಿಗೆ ಪಾವತಿ ದಾಖಲೆ ಸಲ್ಲಿಕೆ ಸೇರಿದಂತೆ ಬಹುತೇಕ ಎಲ್ಲಾ ಆನ್ಲೈನ್ ಮಾಡಲಾಗಿದ್ದು, ವೆಬ್ಸೈಟ್ ಪೋರ್ಟಲ್ ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ತೆರಿಗೆ ಪಾವತಿ ವಿಧಾನದಲ್ಲಿ ಆಗುವಂತಹ ಸಣ್ಣ ತಪ್ಪನ್ನು ಕೂಡ ಸರಿಪಡಿಸಿಕೊಳ್ಳಲು ಆಗದಂತಹ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಪ್ರಕಾಶ್ ಆರೋಪಿಸಿದರು.
ವೆಬ್ ಪೋರ್ಟಲ್ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿ ಪಾವತಿ ವಿಳಂಬವಾದರೂ ಅದಕ್ಕೆ ದಂಡ ಹಾಕಿ, ತೆರಿಗೆದಾರರು ಹಾಗೂ ಸಲಹೆಗಾರರನ್ನು ಹೊಣೆ ಮಾಡಿ ದಂಡವನ್ನು ವಿಧಿಸಲಾಗುತ್ತದೆ. ಕೋವಿಡ್ ಸಂದರ್ಭದಲ್ಲೂ ಕೂಡ ತೆರಿಗೆದಾರರಿಗೆ ನೋಟಿಸ್ ನೀಡಿ ಶೋಷಣೆ ಮಾಡಲಾಗಿದೆ ಎಂದು ದೂರಿದರು.
ಈ ವೇಳೆ ತೆರಿಗೆ ಸಲಹೆಗಾರರಾದ ಟಿ.ಎಲ್.ಸುರೇಶ್ ರಾವ್, ಕೆ.ಜಿ.ಸುರೇಶ್, ಫಣೀಂದ್ರ ಸೇರಿದಂತೆ ಅನೇಕ ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.