ತುಮಕೂರು: ಜಿಲ್ಲೆಯ ಸಿದ್ಧಗಂಗಾ ಮಠದಲ್ಲಿ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಠಕ್ಕೆ ಬರುವ ಸಾವಿರಾರು ಭಕ್ತರಿಗೆ ಶಿವರಾತ್ರಿಯ ವಿಶೇಷ ಸಿಹಿ ಖಾದ್ಯವನ್ನು ಉಣಬಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪ್ರತಿ ವರ್ಷ ಶಿವರಾತ್ರಿ ಹಬ್ಬದ ವೇಳೆ ಸಿದ್ಧಗಂಗಾ ಮಠದಲ್ಲಿ ಶಿವಭಕ್ತರಿಗೆ ತಂಬಿಟ್ಟು ಉಂಡೆಗಳನ್ನು ವಿತರಣೆ ಮಾಡಲಾಗುತ್ತದೆ. ಈ ಬಾರಿಯೂ 25,000 ತಂಬಿಟ್ಟು ಉಂಡೆಗಳನ್ನು ಭಕ್ತರಿಗೆ ಸಿಹಿ ಖಾದ್ಯವಾಗಿ ವಿತರಣೆ ಮಾಡಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ತಂಬಿಟ್ಟು ಉಂಡೆಗಳನ್ನು ಸಿದ್ಧಪಡಿಸಲು ಬೆಲ್ಲ, ಗೋಧಿ, ಅಕ್ಕಿ, ಏಲಕ್ಕಿ, ಕೊಬ್ಬರಿ, ಕಡಲೆಬೀಜ, ಹುರಿಗಡಲೆ ಬಳಸಿಕೊಂಡು ಪಾಕ ತೆಗೆದು ಹದವಾಗಿ ಬೇಯಿಸಿ ಮಾಡಲಾಗುವುದು. ನಿರಂತರವಾಗಿ ಮೂರು ದಿನಗಳ ಕಾಲ ಪಾಕಶಾಲೆ ಸಿಬ್ಬಂದಿ, ಶಿಕ್ಷಕರು ಹಾಗೂ ಮಠದ ವಿದ್ಯಾರ್ಥಿಗಳು 25,000 ತಂಬಿಟ್ಟುಂಡೆಗಳನ್ನು ಸಿದ್ಧಪಡಿಸಿದ್ದಾರೆ. ಇಂದು ಭಕ್ತರಿಗೆ ಊಟದ ಸಂದರ್ಭದಲ್ಲಿ ವಿತರಣೆ ಮಾಡಲಾಗುವುದು.