ತುಮಕೂರು: ಪಟ್ಟಣದಲ್ಲಿ ಅಭಿವೃದ್ಧಿ ಪಡಿಸಿರುವ ಕೆಶಿಪ್ (ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ) ರಸ್ತೆಯ ದುರಸ್ತಿ ಮಾಡಬೇಕಾದರೆ ಕೆಶಿಪ್ ಇಲಾಖೆಯ ಅನುಮತಿಯನ್ನೇ ಪಡೆದು ಮಾಡಬೇಕೆಂದು ಪುರಸಭೆ ಮುಖ್ಯಾಧಿಕಾರಿ ನವೀನ್ ಚಂದ್ರ ತಿಳಿಸಿದರು.
ಪಟ್ಟಣದಲ್ಲಿ ಕೆಶಿಪ್ ಇಲಾಖೆ ಕಳಪೆ ಕಾಮಗಾರಿ ನಡೆಸಿದ್ದು, ಮಳೆ ಬಂದಾಗಲೆಲ್ಲ ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗುತ್ತದೆ. ಈ ಕುರಿತು 20ಕ್ಕೂ ಹೆಚ್ಚು ಬಾರಿ ಕೆಶಿಪ್ ಇಲಾಖೆಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸದ ಕಾರಣ ಜನಸಾಮಾನ್ಯರು ಪುರಸಭೆಯ ನಿರ್ಲಕ್ಷ್ಯವೆಂಬಂತೆ ನಮ್ಮ ಕಡೆ ಕೈ ತೋರಿಸುತ್ತಿದ್ದಾರೆ ಎಂದರು.
ಇದು ನಮಗೆ ಬಹುದೊಡ್ಡ ಸಮಸ್ಯೆಯಾಗಿದ್ದು, ದುರಸ್ತಿ ಮಾಡಬೇಕಾದರೆ ಕೆಶಿಪ್ ಅನುಮತಿ ಪಡದೇ ಮಾಡಬೇಕು. ಆದರೆ ಜನಸಾಮಾನ್ಯರ ಒತ್ತಾಯದ ಮೇರೆಗೆ ಪಟ್ಟಣದಲ್ಲಿನ ಮುಖ್ಯ ರಸ್ತೆಯಲ್ಲಿನ ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆ ಹರಿಸಲಾಗುವುದೆಂದು ನವೀನ್ ಚಂದ್ರ ತಿಳಿಸಿದರು.