ತುಮಕೂರು: ಯಾವ ಶಾಸಕರಿಗೂ ಮಧ್ಯಂತರ ಚುನಾವಣೆಯನ್ನು ಎದುರಿಸುವುದು ಇಷ್ಟವಿಲ್ಲ. ಮೇಲ್ಮಟ್ಟದಲ್ಲಿ ಏನು ಬೇಕಾದ್ರು ಹೇಳಿಕೊಳ್ಳಬಹುದು. ಆದ್ರೆ ಒಳ ಹಂತದಲ್ಲಿ ಶಾಸಕರು ಕುಳಿತು ಚರ್ಚೆ ಮಾಡಿದಾಗ ಸದ್ಯದ ಮಟ್ಟಿಗೆ ಮಧ್ಯಂತರ ಚುನಾವಣೆ ಎದುರಿಸುವ ಶಕ್ತಿ ಯಾರಿಗೂ ಇಲ್ಲ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ಹೇಳಿದ್ದಾರೆ.
ತಾಲೂಕಿನ ಹೆಬ್ಬೂರಿನಲ್ಲಿ ನಡೆದ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಶಾಸಕರ ಕ್ಷೇತ್ರದಲ್ಲಿ ಕೆಲವೊಂದು ಕೆಲಸಗಳು ಆಗಿರುವುದಿಲ್ಲ. ಹೀಗಾಗಿ ಕೆಲ ಅಸಮಾಧಾನಗಳು ಇರುತ್ತವೆ. ಅವೆಲ್ಲವನ್ನು ಶಮನಗೊಳಿಸಲು 9 ಅಥವಾ 10 ನೇ ತಾರೀಕು ಸಚಿವ ಡಿ.ಕೆ.ಶಿವಕುಮಾರ್ ಮತ್ತು ಉಪ ಮುಖ್ಯಮಂತ್ರಿ ಪರಮೇಶ್ವರ್ ಅವರು ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಜಾನುವಾರುಗಳು, ಕುರಿ ಮತ್ತು ಮೇಕೆಗಳನ್ನು ಫಲಾನುಭವಿಗಳಿಗೆ ಶಾಸಕ ಗೌರಿಶಂಕರ್ ವಿತರಿಸಿದರು.