ತುಮಕೂರು: ರಸ್ತೆ ಕಾಮಗಾರಿಗೆ ಸಂಬಂಧಪಟ್ಟಂತೆ ನಾಗೇನಹಳ್ಳಿಯ ಹುಡುಗನೊಬ್ಬ ನನ್ನ ಬಳಿ ಬಂದು ಅವಾಚ್ಯ ಶಬ್ದಗಳಿಂದ ಮಾತನಾಡಿದ. ಹೀಗಾಗಿ ನಾನು ಅವನಿಗೆ ಬುದ್ಧಿ ಹೇಳಿ ಕಳುಹಿಸಿದೆ ಎಂದು ಪಾವಗಡ ಕಾಂಗ್ರೆಸ್ ಶಾಸಕ ವೆಂಕಟರಮಣಪ್ಪ ಸ್ಪಷ್ಟಪಡಿಸಿದ್ದಾರೆ.
ನಾಗೇನಹಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಯುವಕನಿಗೆ ತಿಳಿಸಿದೆ. ಆದರೆ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಹಾಗೆಲ್ಲ ಮಾತನಾಡಬೇಡ ಎಂದು ಬುದ್ಧಿವಾದ ಹೇಳಿದೆ ಎಂದು ಶಾಸಕರು ತಿಳಿಸಿದ್ದಾರೆ.
ಘಟನೆ: ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಬೇಕೆಂದು ಯುವಕನೊಬ್ಬ ಮನವಿ ಮಾಡುವ ವೇಳೆ ಶಾಸಕ ವೆಂಕಟರಮಣಪ್ಪ ಯುವಕನಿಗೆ ಬುಧವಾರದಂದು ಕಪಾಳಮೋಕ್ಷ ಮಾಡಿದ್ದರು. ಪಾವಗಡ ತಾಲೂಕು ಕಚೇರಿ ಆವರಣದಲ್ಲಿ ಈ ಘಟನೆ ನಡೆದಿತ್ತು. ನಂತರ ಸ್ಥಳೀಯರು ಯುವಕನನ್ನು ಸಮಾಧಾನಪಡಿಸಿ ದೂರ ಕರೆದುಕೊಂಡು ಹೋಗಿದ್ದಾರೆ. ಅಲ್ಲದೇ ರಸ್ತೆ ಕಾಮಗಾರಿಗೆ ಈಗಾಗಲೇ ಟೆಂಡರ್ ಆಗಿದೆ. ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದು ಯುವಕನಿಗೆ ತಿಳಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇಂದು ಯುವಕ ಮತ್ತು ಶಾಸಕ ವೆಂಕಟರಮಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ರಸ್ತೆ ಕಾಮಗಾರಿಗೆ ಮನವಿ ಮಾಡಿದ್ದಕ್ಕೆ ಯುವಕನಿಗೆ ಪಟಾರ್ ಎಂದು ಕೆನ್ನೆಗೆ ಬಾರಿಸಿದ ಶಾಸಕ
ಬಿಜೆಪಿ ಟ್ವೀಟ್: ಈ ಬಗ್ಗೆ ಬಿಜೆಪಿ ಟ್ವೀಟ್ ಮಾಡಿದೆ. ''ಗೂಂಡಾಗಿರಿಗೆ ಮತ್ತೊಂದು ಹೆಸರೇ ಕಾಂಗ್ರೆಸ್. ಅಂದು ಕರೆಂಟ್ ಕೇಳಿದ ನಾಗರಿಕನಿಗೆ ಜೈಲು ಭಾಗ್ಯ. ಇಂದು ನೀರು ಕೇಳಿದವನಿಗೆ ಕಪಾಳ ಮೋಕ್ಷದ ಭಾಗ್ಯ. ಕೊತ್ವಾಲನ ಶಿಷ್ಯನೇ ಕೆಪಿಸಿಸಿಯ ಅಧ್ಯಕ್ಷನಾಗಿರುವಾಗ ಸೌಜನ್ಯತೆ ಎಂಬ ಪದಕ್ಕೆ ಅರ್ಥ ಇರಲು ಹೇಗೆ ಸಾಧ್ಯ?'' ಎಂದು ಪ್ರಶ್ನಿಸಿದೆ.