ತುಮಕೂರು: ಸಿದ್ದಗಂಗಾ ಮಠಕ್ಕೆ ನೂತನ ಸಚಿವ ಪ್ರಭು ಚವ್ಹಾಣ್ ಭೇಟಿ ನೀಡಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಬೆಂಗಳೂರಿನಿಂದ ನೇರವಾಗಿ ಶ್ರೀ ಮಠಕ್ಕೆ ಭೇಟಿ ನೀಡಿದ ಅವರು ಸಿದ್ದಲಿಂಗ ಸ್ವಾಮೀಜಿಯಿಂದ ಆಶೀರ್ವಾದ ಪಡೆದರು.
ಬೀದರ್ಗೆ ತೆರಳುವ ಮಾರ್ಗ ಮಧ್ಯೆ ಮೊದಲು ಶ್ರೀಮಠಕ್ಕೆ ಭೇಟಿ ನೀಡಿದ ವೇಳೆ ಕುಟುಂಬ ಸದಸ್ಯರು ಹಾಜರಿದ್ದರು. ಪ್ರಮಾಣವಚನ ಸ್ವೀಕರಿಸುವ ಸಂದರ್ಭದಲ್ಲಿ ಧರಿಸಿದ್ದ ವಿಭಿನ್ನ ಪೋಷಾಕು ಕುರಿತು ಶ್ರೀ ಸಿದ್ದಲಿಂಗ ಸ್ವಾಮೀಜಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಭು ಚವ್ಹಾಣ್ ಅದು ನಮ್ಮ ಸೇವಾಲಾಲ್ ಸಮುದಾಯದ ಸಂಸ್ಕೃತಿ ಎಂದು ತಿಳಿಸಿದರು.
ಸಚಿವರಾಗಿದ್ದ ಅವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಅರ್ಧಕ್ಕೆ ನಿಂತಿವೆ. ಅವುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನ ಮೇಲಿದೆ. ಪ್ರತಿಯೊಂದು ಜಿಲ್ಲೆಯಲ್ಲಿಯೂ ಗೋಶಾಲೆ ತೆರೆಯಬೇಕೆಂಬ ಆಕಾಂಕ್ಷೆ ಹೊಂದಿದ್ದೇನೆ ಎಂದು ತಿಳಿಸಿದರು. ಒಳ್ಳೆಯ ಕೆಲಸಗಳಿಗೆ ಉತ್ತಮ ಅವಕಾಶವಿದೆ. ಮುಂದುವರೆಯಿರಿ ಎಂದು ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಮಾಡಿದರು.