ತುಮಕೂರು: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೆಲ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕೆಂಬ ಕಾರಣಕ್ಕೆ ಹಠ ಮಾಡಿ ಸಣ್ಣ ನೀರಾವರಿ ಖಾತೆ ಪಡೆದುಕೊಂಡಿದ್ದೆ. ಈ ಬಾರಿ ಒತ್ತಾಯ ಮಾಡುವುದಿಲ್ಲ ಎಂದು ನೂತನ ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಇಂದು ನೂತನ ಸಚಿವರಾದ ಮಾಧುಸ್ವಾಮಿ ಹಾಗೂ ಬಿ.ಸಿ. ನಾಗೇಶ್ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮೀಜಿಯ ಗದ್ದುಗೆ ದರ್ಶನ ಪಡೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಧುಸ್ವಾಮಿ, ಬೊಮ್ಮಾಯಿಯವರ ಸಚಿವ ಸಂಪುಟದಲ್ಲಿ ಸಚಿವನಾಗಿದ್ದೇನೆ. ಈ ಬಾರಿ ಇಂತಹದ್ದೇ ಖಾತೆ ಬೇಕೆಂದು ಒತ್ತಾಯಿಸುವುದಿಲ್ಲ. ಈಗಾಗಲೇ ನನ್ನ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಬಹುತೇಕ ಕಾಮಗಾರಿಗಳು ಅನುಷ್ಠಾನಗೊಳ್ಳುವ ಹಂತದಲ್ಲಿವೆ. ಸಣ್ಣ ನೀರಾವರಿ ಖಾತೆ ಸಚಿವರಾಗಿ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ತುಮಕೂರು ಜಿಲ್ಲೆಯಲ್ಲಿ ಈ ಬಾರಿ ಇಬ್ಬರು ಸಚಿವರಾಗಿದ್ದೇವೆ. ಮುಖ್ಯಮಂತ್ರಿಗಳು ಯಾವ ಖಾತೆ ಕೊಟ್ಟರೂ ಕೆಲಸ ಮಾಡುತ್ತೇವೆ. ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಕೆಲವರಿಗೆ ಬೇಸರವಾಗುತ್ತದೆ. ರಾಜಕಾರಣದಲ್ಲಿ ಇದು ಸರ್ವೇಸಾಮಾನ್ಯ ಎಂದರು.
'ಸಂಘಟನೆಯ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ'
ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಸಚಿವ ಸ್ಥಾನ ನೀಡಿರುವ ಸಂಘಟನೆಯ ಅಪೇಕ್ಷೆಯಂತೆ ಕೆಲಸ ಮಾಡುತ್ತೇನೆ. ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳು ನನ್ನ ಮೇಲೆ ವಿಶ್ವಾಸವಿಟ್ಟು ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಮಂತ್ರಿಗಿರಿಗೆ ನಾನು ಆಕಾಂಕ್ಷಿಯೂ ಆಗಿರಲಿಲ್ಲ, ಅಪೇಕ್ಷಿತನೂ ಆಗಿರಲಿಲ್ಲ ಎಂದು ನೂತನ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಇನ್ನೆರಡು ದಿನದಲ್ಲಿ ಯಾದಗಿರಿ ಜಿಲ್ಲೆಗೆ ತೆರಳಿ ಅಲ್ಲಿನ ಕೊರೊನಾ ನಿರ್ವಹಣೆ ಕುರಿತಂತೆ ಚರ್ಚಿಸಿ, ಜವಾಬ್ದಾರಿ ವಹಿಸಿಕೊಳ್ಳುತ್ತೇನೆ. ಬಿಜೆಪಿಯಲ್ಲಿ ಜಾತಿಯ ಕೋಟ ಯಾವುದೂ ಇಲ್ಲ. ಅಂದಿನ ಅವಶ್ಯಕತೆಗೆ ತಕ್ಕಂತೆ ಕೆಲಸ ನಡೆಯಲಿದೆ. ಸುರೇಶ್ ಕುಮಾರ್ ಅವರನ್ನು ತೆಗೆದುಹಾಕಿ, ನನಗೆ ಸಚಿವ ಸ್ಥಾನ ಕೊಟ್ಟಿದ್ದಾರೆ ಎಂಬುದು ಸರಿಯಲ್ಲ. ಅವರಷ್ಟು ಅನುಭವ ನನಗಿಲ್ಲ ಎಂದು ನಾಗೇಶ್ ಹೇಳಿದ್ರು.
ಇದನ್ನೂ ಓದಿ: ಮೇಕೆದಾಟು ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ: ಅಣ್ಣಾಮಲೈಗೆ ಬೊಮ್ಮಾಯಿ ತಿರುಗೇಟು