ತುಮಕೂರು: ಜಿಲ್ಲೆಯಲ್ಲಿ ಬಹುತೇಕ ಬಯಲುಸೀಮೆ ಪ್ರದೇಶಗಳಲ್ಲಿ ಉಷ್ಣಾಂಶ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇನ್ನೊಂದೆಡೆ ಇದು ಜಿಲ್ಲೆಯ ಮಾವು ಬೆಳೆ ಮೇಲೆ ವಿಪರೀತ ಪರಿಣಾಮ ಬೀರುತ್ತಿದೆ. ಬಿಸಿಲಿನ ಹೊಡೆತಕ್ಕೆ ಮರದಲ್ಲಿರುವ ಚಿಕ್ಕ ಕಾಯಿಗಳು ನೆಲ ಕಚ್ಚುತ್ತಿವೆ.
ಪ್ರತಿವರ್ಷ ಇದು ಸರ್ವೆ ಸಾಮಾನ್ಯವಾದರೂ ಈ ಬಾರಿ ಉಷ್ಣಾಂಶ ಹೆಚ್ಚುತ್ತಿರುವುದಕ್ಕೆ ಅಧಿಕ ಸಂಖ್ಯೆಯಲ್ಲಿ ಕಾಯಿಗಳು ಮಣ್ಣುಪಾಲಾಗುತ್ತಿದ್ದು, ಮಾವು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯ ಕೆಲವು ಭಾಗದಲ್ಲಿ ತಡವಾಗಿ ಮಾವಿನ ಫಸಲು ಬರುತ್ತಿದ್ದು, ಮುಖ್ಯವಾಗಿ ಮಾವಿನ ಹೂವುಗಳು ಕೂಡ ನೆಲಕ್ಕೆ ಬೀಳುತ್ತಿವೆ. ಇದನ್ನು ತಡೆಗಟ್ಟಲು ಬೆಳಗಾರರಿಗೆ ಸಾಧ್ಯವಾಗುತ್ತಿಲ್ಲ.
ಜಿಲ್ಲೆಯಲ್ಲಿ ಬಹುತೇಕ ಮಾವು ಮೇ ತಿಂಗಳಲ್ಲಿ ಕಟಾವಿಗೆ ಬರುತ್ತದೆ. ಈ ಬಾರಿ ಏಪ್ರಿಲ್ ತಿಂಗಳಲ್ಲೇ ಕಾಯಿಗಳು ನೆಲಕ್ಕೆ ಬೀಳುತ್ತಿರುವುದು ಒಂದು ರೀತಿ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿತ ಉಂಟಾಗುವ ಭಯ ಮಾವು ಬೆಳೆಗಾರರಲ್ಲಿ ಮನೆಮಾಡಿದೆ. ಜಿಲ್ಲೆಯಾದ್ಯಂತ 22,127 ಹೆಕ್ಟೇರ್ ಪ್ರದೇಶದಲ್ಲಿ ಮಾವಿನ ಬೆಳೆಯಲಾಗಿದೆ. ಒಂದು ಲಕ್ಷ ಟನ್ ಉತ್ಪಾದನೆ ಗುರಿ ಹೊಂದಲಾಗಿದೆ. ಜಿಲ್ಲೆಯ ಗುಬ್ಬಿ ತಾಲೂಕಿನ ವ್ಯಾಪ್ತಿಯಲ್ಲಿ ಅಧಿಕ 7069 ಹೆಕ್ಟೇರ್ ಪ್ರದೇಶದಲ್ಲಿ ಮಾವು ಫಸಲು ಸಮೃದ್ಧವಾಗಿ ಬೆಳೆದು ನಿಂತಿದೆ.
ತುಮಕೂರು ತಾಲೂಕು ವ್ಯಾಪ್ತಿಯಲ್ಲಿ 6249 ಹೆಕ್ಟೇರ್, ಕುಣಿಗಲ್ ತಾಲೂಕಿನಲ್ಲಿ 3169 ಹೆ., ಪಾವಗಡ ತಾಲೂಕಿನಲ್ಲಿ 1379 ಹೆ., ಶಿರಾ ತಾಲೂಕಿನಲ್ಲಿ 1074ಹೆ., ಮಧುಗಿರಿ ತಾಲೂಕಿನಲ್ಲಿ 1051 ಹೆ., ಕೊರಟಗೆರೆ ತಾಲೂಕಿನಲ್ಲಿ 822ಹೆ., ತುರುವೇಕೆರೆ ತಾಲೂಕಿನಲ್ಲಿ 328ಹೆ., ತಿಪಟೂರು ತಾಲೂಕಿನಲ್ಲಿ 300ಹೆ., ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ 286 ಹೆಕ್ಟೇರ್ ವ್ಯಾಪ್ತಿಯಲ್ಲಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಮಾವು ಬೆಳೆದು ನಿಂತಿದೆ.
ತೋಟಗಾರಿಕೆ ಇಲಾಖೆಯಿಂದ ಮಾರುಕಟ್ಟೆ ಸೌಲಭ್ಯ
ಕಳೆದ ಬಾರಿಯಂತೆ ಈ ಬಾರಿಯೂ ಕೊರೊನಾ ಸೋಂಕು ಹರಡುವಿಕೆ ಪ್ರತಿ ಮಾವು ಮಾರುಕಟ್ಟೆ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕ ಕೂಡ ರೈತರಲ್ಲಿ ಮನೆ ಮಾಡಿದೆ. ಮಾವು ಬೆಳೆಯ ಕುರಿತಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ರಘು ಅವರ ಪ್ರಕಾರ ಮಾವಿನ ಕೊಯ್ಲು ಆರಂಭವಾಗುವುದು ಸಾಮಾನ್ಯವಾಗಿ ಮೇ ತಿಂಗಳಲ್ಲಿ. ಈ ಬಾರಿ ಜಿಲ್ಲೆಯಲ್ಲಿ 1 ಲಕ್ಷ ಟನ್ ಮಾವು ಉತ್ಪಾದನೆಯ ನಿರೀಕ್ಷೆ ಇದೆ. ಆದರೆ ಬಿಸಿಲಿನ ತಾಪಕ್ಕೆ ಚಿಕ್ಕ ಕಾಯಿಗಳು ಉದುರುತ್ತಿವೆ. ಉಷ್ಣಾಂಶ ಇನ್ನಷ್ಟು ಹೆಚ್ಚಿದರೆ ಮಾವಿನ ಬೆಳೆ ಮೇಲೆ ಪರಿಣಾಮ ಬೀರಬಹುದು. ಆದರೆ ಇನ್ನೊಂದೆಡೆ ಕಳೆದ ಬಾರಿಯಂತೆ ಮಾರುಕಟ್ಟೆಯಲ್ಲಿ ಮಾವು ಮಾರಾಟಕ್ಕೆ ಸಂದಿಗ್ಧತೆ ಉಂಟಾಗುವುದಿಲ್ಲ. ಅಲ್ಲದೆ ತೋಟಗಾರಿಕೆ ಇಲಾಖೆಯಿಂದ ಮಾವು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಒದಗಿಸುವಂತಹ ಎಲ್ಲ ರೀತಿಯ ಪ್ರಯತ್ನಗಳು ಮುಂದುವರಿಯುತ್ತಿವೆ ಎಂದು ತಿಳಿಸಿದ್ದಾರೆ.