ತುಮಕೂರು: ಮಂಡ್ಯದಲ್ಲಿ ಸೋತಿರಬಹುದು ಆದರೆ ಅನುಭವ ಅಪಾರ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಆದ ನಾನು ನಿಜ ಜೀವನದಲ್ಲೂ ಅಭಿಮನ್ಯುವಾಗಿ ಹೋದೆ. ಕುರುಕ್ಷೇತ್ರದಲ್ಲಿ ಘಂಟೆ ಬಾರಿಸಿದ ಬಳಿಕ ಮತ್ತೆ ಯುದ್ಧ ಮಾಡುವ ಹಾಗಿಲ್ಲ. ಆದರೆ ನನಗೆ ಯುದ್ಧ ಮುಗಿದರೂ ಹಿಂದಿನಿಂದ ತಿವಿದರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.
ತುಮಕೂರು ತಾಲೂಕು ಹೊನ್ನುಡಿಕೆ ಗ್ರಾಮದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ನಿಖಿಲ್, ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಸಲು ಕೆಲವರು ನಿದ್ದೆ ಮಾಡಲಿಲ್ಲ, ಊಟ ತಿಂಡಿ ಬಿಟ್ಟಿದ್ದರು, ಷಡ್ಯಂತ್ರ ಮಾಡಿದ್ರು. ನಾನು ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿದ್ದೆ, ಆದರೆ ಮೈತ್ರಿ ಧರ್ಮ ಪಾಲನೆ ಆಗಲಿಲ್ಲ ಎಂದರು. ಮಂಡ್ಯ ಚುನಾವಣೆಯನ್ನು ಇಡೀ ದೇಶ ಗಮನಿಸಿತ್ತು. ಅದು ಇತಿಹಾಸ ನಿರ್ಮಿಸಿದೆ ಅಂದರೆ ತಪ್ಪಾಗಲಾರದು. ಎಷ್ಟೋ ಜನರು ಕುಮಾರಣ್ಣನ ಹೆಸರಲ್ಲಿ ಗೆದ್ದಿದ್ದಾರೆ. ಆದರೆ ಯಾವತ್ತೂ ಚುನಾವಣೆಗೆ ನಿಲ್ಲಲು ನಾನು ಮುಂದಾಗಿರಲಿಲ್ಲ. ಮುಖಂಡರ ಒತ್ತಾಯದ ಮೇರೆಗೆ ನಿಂತೆ ಎಂದರು.
ಯೋಗ ಪಡೆದುಕೊಂಡು ಬರಬೇಕು. ಯೋಗ್ಯತೆ ಬೆಳೆಸಿಕೊಳ್ಳಬೇಕು. ನಾನು ಯೋಗ್ಯತೆ ಬೆಳೆಸಿಕೊಳ್ಳುತ್ತಿದ್ದೇನೆ. ದೊಡ್ಡಗೌಡರು ಯುವ ಘಟಕದ ಸ್ಥಾನ ನೀಡಿ ನನಗೆ ದೊಡ್ಡ ಜವಾಬ್ದಾರಿ ಕೊಟ್ಟರು. ಒಲ್ಲದ ಮನಸ್ಸಿನಿಂದ ನಾನು ಒಪ್ಪಿಕೊಂಡೆ ಎಂದು ಹೇಳಿದರು.
ನಾರಾಯಣಗೌಡ ವಿರುದ್ಧ ನಿಖಿಲ್ ಆಕ್ರೋಶ:
ಅಂದು ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡರಿಗೆ ಟಿಕೆಟ್ ನೀಡಲು ವಿರೋಧವಿತ್ತು. ಆದರೆ ಇದೇ ನಿಖಿಲ್ ಕುಮಾರಸ್ವಾಮಿ ನಾರಾಯಣ ಗೌಡರಿಗೆ ಟಿಕೆಟ್ ಘೋಷಣೆ ಮಾಡಿದ್ದು, ತಂದೆಯ ಅನುಮತಿ ಮೇರೆಗೆ ನಾನೇ ಕಾರ್ಯಕ್ರಮದಲ್ಲಿ ಟಿಕೆಟ್ ಘೋಷಣೆ ಮಾಡಿದ್ದು. ಆದರೆ ಗೆದ್ದ ನಂತರ ನಾರಾಯಣ ಗೌಡರು ವೈಯಕ್ತಿಕ ವಿಚಾರ ತಗೊಂಡು ಬರುತ್ತಿದ್ದರು. ಜನರ ಸಮಸ್ಯೆ ತಗೊಂಡು ಬರುತ್ತಿರಲಿಲ್ಲ. ನನಗೇನು ಆಗ್ತಿಲ್ಲವಲ್ಲ ಎಂದು ಬರುತ್ತಿದ್ದರು. ಈಗ ಮುಖ್ಯಮಂತ್ರಿಗಳ ಹಿಂದೆ ನಾರಾಯಣ ಗೌಡರ ಮಕ್ಕಳು ಕಾಣಿಸಿಕೊಳ್ಳುತ್ತಿದ್ದಾರೆ. ಫೈಲ್ಗಳನ್ನ ಇಟ್ಟುಕೊಂಡು ಅಧಿಕಾರಿಗಳಿಗೆ ದಿನನಿತ್ಯ ಪೋನ್ ಮಾಡ್ತಾರೆ. ಆದರೆ ನಾನೂ ಎಂದೂ ನಮ್ಮ ಅಪ್ಪನ ಅಧಿಕಾರದಲ್ಲಿ ಮೂಗು ತೂರಿಸಿಲ್ಲ ಎಂದರು.
14 ತಿಂಗಳ ಕಾಲ ನಮ್ಮಪ್ಪನ ಅಧಿಕಾರಾವಧಿಯಲ್ಲಿ ಸನಿಹಕ್ಕೂ ಹೋಗಿಲ್ಲ. ಸುಖಾಸುಮ್ಮನೆ ನನ್ನನ್ನ ಟ್ರೋಲ್ ಮಾಡಿದ್ರು. ಮಾನಸಿಕವಾಗಿ ಕೊಲ್ಲಲು ಪ್ರಯತ್ನ ಮಾಡಿದರು ಎಂದು ನಿಖಿಲ್ ಆರೋಪಿಸಿದರು.