ತುಮಕೂರು: ಜಿಲ್ಲೆಯಲ್ಲಿ ಶ್ರೀ ಸಿದ್ದಗಂಗಾ ಮಠ ಹೊರತುಪಡಿಸಿದ್ರೆ ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಸಂಖ್ಯೆಯೇ ಹೆಚ್ಚು. ದೇಶ ವಿದೇಶದಲ್ಲಿಯೂ ಶಿಕ್ಷಣ ಸಂಸ್ಥೆಗಳಿವೆ. ರಾಜ್ಯದಲ್ಲಿ ನೆಲಮಂಗಲ ಮತ್ತು ತುಮಕೂರಿನ ಹೆಗ್ಗೆರೆಯಲ್ಲಿ ತಲಾ ಒಂದು ಮೆಡಿಕಲ್ ಕಾಲೇಜುಗಳಿವೆ.
ತುಮಕೂರು ನಗರದ ಮರಳೂರಿನಲ್ಲಿ 55 ಎಕರೆ ಪ್ರದೇಶದಲ್ಲಿ ಸಿದ್ಧಾರ್ಥ ಎಂಜಿನಿಯರಿಂಗ್ ಕಾಲೇಜು ಇದೆ. 1988ರಲ್ಲಿ ಅಸ್ತಿತ್ವಕ್ಕೆ ಬಂದಿರುವ ಹೆಗ್ಗೆರೆಯಲ್ಲಿನ ಮೆಡಿಕಲ್ ಕಾಲೇಜು 21 ಕಟ್ಟಡಗಳನ್ನು ಒಳಗೊಂಡಿದ್ದು, 73,875 ಚದರ ಅಡಿಯ ಅಂದಾಜು 20 ಕೋಟಿ ರೂ. ಮೌಲ್ಯದ್ದಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧೆಡೆ 10ಕ್ಕೂ ಹೆಚ್ಚು ಶಾಲಾ-ಕಾಲೇಜುಗಳು ಅಸ್ತಿತ್ವದಲ್ಲಿವೆ. ಇದಲ್ಲದೆ ಆಸ್ಟ್ರೇಲಿಯಾ ಮತ್ತು ಮಲೇಷಿಯಾದಲ್ಲೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳಿವೆ.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿಯಾಗಿ, ಮಹಾನಿರ್ದೇಶಕರಾಗಿ ಜಿ.ಪರಮೇಶ್ವರ್ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ಸಾವಿರಾರು ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಆಸ್ತಿ-ಪಾಸ್ತಿ ಇದೆ ಎನ್ನಲಾಗಿದೆ.
ಈ ಹಿಂದೆಯೇ ಹಲವು ಬಾರಿ ಐಟಿ ದಾಳಿ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿತ್ತು. ಆ ಸಂದರ್ಭದಲ್ಲಿ ಎಚ್ಚೆತ್ತುಕೊಂಡಿದ್ದ ಡಾ. ಪರಮೇಶ್ವರ್, ತಮ್ಮ ಶಿಕ್ಷಣ ಸಂಸ್ಥೆಯ ಎಲ್ಲಾ ವ್ಯವಹಾರಗಳ ಲೆಕ್ಕಪತ್ರಗಳ ಲೆಕ್ಕ ಪರಿಶೋಧನೆ(ಆಡಿಟ್) ಮಾಡಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಈಗ ಐಟಿ ದಾಳಿಯ ಹಿಂದೆ ಹಲವು ಪ್ರಶ್ನೆಗಳು ಎದ್ದಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿದೆ. ಅದ್ರಲ್ಲಿ ಕಡಿಮೆ ಅವಧಿಯಲ್ಲಿ ನೆಲಮಂಗಲ ಬಳಿ ಬೃಹತ್ ಮೆಡಿಕಲ್ ಕಾಲೇಜೊಂದು ತೆರೆದಿದೆ. ಇತ್ತೀಚೆಗೆ ಮೆಡಿಕಲ್ ಕಾಲೇಜಿನ ಸೀಟು ಹಂಚಿಕೆಯಲ್ಲಿ ಅವ್ಯವಹಾರದ ಆರೋಪ, ಸರ್ಕಾರಿ ಸೀಟುಗಳಿಗೂ ಕೂಡ ಹೆಚ್ಚಿನ ಶುಲ್ಕ ಪಡೆಯಲಾಗಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು.
ಎಂಜಿನಿಯರಿಂಗ್ ಕಾಲೇಜು ಸೀಟುಗಳ ಹಂಚಿಕೆಯಲ್ಲೂ ಅವ್ಯವಹಾರ ಆರೋಪ ಕೇಳಿ ಬಂದಿತ್ತು. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಹೊಂದಿರುವ ಸ್ವತ್ತುಗಳಲ್ಲಿ ಸಮರ್ಪಕ ದಾಖಲೆಗಳು ಇಲ್ಲ ಎನ್ನುವ ಆರೋಪಗಳೂ ಕೇಳಿಬಂದಿದ್ದವು.