ತುಮಕೂರು: ಅಪ್ರಾಪ್ತೆಯನ್ನು ವಿವಾಹವಾಗಿ ನಂತರ ಕ್ಷುಲ್ಲಕ ಕಾರಣಕ್ಕೆ ಕೊಂದು ಪರಾರಿಯಾಗಿದ್ದ ಆರೋಪಿ ಹಾಗೂ ಆತನ ಕುಟುಂಬದವರನ್ನು ಬಂಧಿಸುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ಲಕ್ಷ್ಮಿಪತಿ ತನ್ನ ಪತ್ನಿ ಶೋಭಾಳನ್ನು ಕತ್ತುಹಿಸುಕಿ ಕೊಲೆಗೈದು ಪೋಷಕರೊಂದಿಗೆ ಪರಾರಿಯಾಗಿದ್ದ.
ಪ್ರಕರಣದ ಹಿನ್ನೆಲೆ:
ಆವಲಯ್ಯನಪಾಳ್ಯದ ಲಕ್ಷ್ಮಿಪತಿ ಅದೇ ಗ್ರಾಮದಲ್ಲಿದ್ದ ತನ್ನ ಅಕ್ಕನ ಮಗಳು ಶೋಭಾಳನ್ನು ಮದುವೆಯಾಗಲು ಮುಂದಾಗಿದ್ದ. ಆದ್ರೆ ಶೋಭಾ ಅಪ್ರಾಪ್ತೆಯಾಗಿದ್ದಳು. ಈ ಬಗ್ಗೆ ಆರೋಪಿಗೆ 2020ರ ಮಾ.23ರಂದು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಿರಿಯ ಸಹಾಯಕಿ ಮನವರಿಕೆ ಮಾಡಿದ್ದರು. ಬಾಲಕಿಗೆ 18 ವರ್ಷ ತುಂಬುವ ತನಕ ಮದುವೆ ಆಗದಂತೆ ಇಬ್ಬರ ಪೋಷಕರಿಂದ ಪತ್ರ ಬರೆಸಿಕೊಂಡಿದ್ದರು. ನಂತರ ಅಧಿಕಾರಿಗಳ ಸೂಚನೆ ತಿರಸ್ಕರಿಸಿದ ಲಕ್ಷ್ಮಿಪತಿ ಶೋಭಾಳನ್ನು ಮದುವೆ ಆಗಿದ್ದನು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಳವನಹಳ್ಳಿ ವೃತ್ತ ಮೇಲ್ವಿಚಾರಕಿ ನಾಗರತ್ನಮ್ಮ ದೂರಿನ ಮೇರೆಗೆ ಲಕ್ಷ್ಮಿಪತಿ ವಿರುದ್ದ ಪೊಕ್ಸೊ ಕಾಯ್ದೆಯಡಿ ಕೊಲೆ ಹಾಗು ಆತನ ತಂದೆ, ತಾಯಿ ಮತ್ತು ಅಪ್ರಾಪ್ತೆಯ ಪೋಷಕರ ವಿರುದ್ದವೂ ಪ್ರಕರಣ ದಾಖಲಾಗಿತ್ತು.