ತುಮಕೂರು: ಕೊರೊನಾ ಸೋಂಕಿನ ಭೀತಿಯ ನಡುವೆಯೂ ರಾಜ್ಯದಲ್ಲಿ ವಸತಿ ಇಲಾಖೆಯ ಕಾರ್ಯಕ್ರಮಗಳು ಜಾರಿಯಲ್ಲಿದ್ದು, 10 ಲಕ್ಷ ಮನೆ ನಿರ್ಮಿಸುವ ಗುರಿ ಮುಂದುವರಿದಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಕೆಲಕಾಲ ಸಂಕಷ್ಟದ ಸ್ಥಿತಿ ಕುರಿತು ಮಾತುಕತೆ ನಡೆಸಿದರು. ಪ್ರಸ್ತುತ ಪ್ರಗತಿಯಲ್ಲಿರುವ ವಸತಿ ನಿರ್ಮಾಣ ಕಾಮಗಾರಿಗಳು ಜಾರಿಯಲ್ಲಿವೆ. ಅದೇ ರೀತಿ ಪ್ರಧಾನಮಂತ್ರಿ ವಸತಿ ಯೋಜನೆ ಕಾರ್ಯಕ್ರಮಗಳು ಕೂಡ ಅನುಷ್ಠಾನದಲ್ಲಿದೆ. ಅದಕ್ಕೆ ಯಾವುದೇ ರೀತಿಯ ತೊಡಕು ಉಂಟಾಗಿಲ್ಲ ಎಂದು ತಿಳಿಸಿದರು.
ಕೊರೊನಾ ಸೋಂಕಿನ ಸಂಕಷ್ಟದ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ಅದರ ಹೊರತಾಗಿ ಬೇರೆ ಯಾವುದೇ ರೀತಿಯ ಚಟುವಟಿಕೆಗಳಲ್ಲಿ ಭಾಗಿಯಾಗಬಾರದೆಂದು ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಹೈಕಮಾಂಡ್ನಿಂದ ಸೂಚನೆ ಬಂದಿದೆ. ಹೀಗಾಗಿ, ಯಾವುದೇ ರೀತಿಯ ರಾಜಕೀಯ ಚಟುವಟಿಕೆಗಳ ಕುರಿತು ಹೇಳಿಕೆ ನೀಡಲು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು, ಈಗಾಗಲೇ ಸೋಂಕಿತರಿಗೆ ನೆರವಾಗುವ ದೃಷ್ಟಿಯಿಂದ ಹಲವು ಮಠಮಾನ್ಯಗಳು ಮುಂದೆ ಬಂದಿವೆ. ಹೀಗಾಗಿ, ಮಠಾಧೀಶರೊಂದಿಗೆ ಇನ್ನಷ್ಟು ಮಾಹಿತಿ ಪಡೆಯಲು ಹಾಗೂ ಅವರ ಆಶೀರ್ವಾದ ಪಡೆಯಲು ನಿರ್ಧರಿಸಿರುವುದಾಗಿ ತಿಳಿಸಿದರು.
ಓದಿ: ಸಿಎಂ ಪುತ್ರ ವಿಜಯೇಂದ್ರ ದೆಹಲಿಗೆ ಹೋಗಿದ್ದು ಇಡಿ ವಿಚಾರಣೆ ಎದುರಿಸಲು: ಯತ್ನಾಳ್