ತುಮಕೂರು :ಹೈ-ವೋಲ್ಟೇಜ್ ಕ್ಷೇತ್ರವಾಗಿ ಪರಿಣಮಿಸಿರುವ ತುಮಕೂರು ಲೋಕಸಭಾ ಕ್ಷೇತ್ರ ಕಣದಲ್ಲಿ ಅಂತಿಮವಾಗಿ 15 ಮಂದಿ ಅಭ್ಯರ್ಥಿಗಳು ಉಳಿದಿದ್ದಾರೆ.
23 ಮಂದಿ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ನಾಲ್ವರ ನಾಮಪತ್ರಗಳು ತಿರಸ್ಕೃತವಾಗಿದ್ದವು. ಉಳಿದಂತೆ ನಾಲ್ವರು ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದು, ಆರು ಮಂದಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಂಭತ್ತು ಮಂದಿ ಪಕ್ಷೇತರರು ಕಣದಲ್ಲಿ ಉಳಿದಿದ್ದಾರೆ.
ಮಾರ್ಚ್ 27 ರಂದು ನಡೆದಿದ್ದ ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ಡಿ.ನಾಗರಾಜಯ್ಯ, ಕೆ.ಹುಚ್ಚೇಗೌಡ, ಹನುಮಂತ, ರಾಮನಾಯಕ, ಹನುಮಂತರಾಯಪ್ಪ ಎಂಬುವರ ನಾಮಪತ್ರಗಳು ತಿರಸ್ಕೃತವಾಗಿದ್ದವು.
ಜತೆಗೆ ಮಾರ್ಚ್ 29ರಂದು ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳಲು ಕೊನೆಯ ದಿನವಾಗಿತ್ತು. ಅಂದು ಹೆಚ್. ಎನ್ ಉದಯಶಂಕರ್, ಹೆಚ್.ಎನ್ ನಾಗಾರ್ಜುನ, ಎಸ್.ಪಿ ಮುದ್ದಹನುಮೇಗೌಡ, ಕೆ. ಎನ್ ರಾಜಣ್ಣ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.
ಹೀಗಾಗಿ ಅಂತಿಮವಾಗಿ ಕಣದಲ್ಲಿ ಜನತಾದಳ ಜಾತ್ಯತೀತ ಪಕ್ಷದ ಎಚ್. ಡಿ ದೇವೇಗೌಡ, ಭಾರತೀಯ ಜನತಾ ಪಾರ್ಟಿಯ ಜಿ.ಎಸ್ ಬಸವರಾಜ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಎಂ.ಶಿವಣ್ಣ, ಬಹುಜನ ಸಮಾಜ ಪಾರ್ಟಿಯ ಕೆ. ಸಿ ಹನುಮಂತರಾಯ, ಉತ್ತಮ ಪ್ರಜಾಕೀಯ ಪಾರ್ಟಿಯ ಎಂ.ಆರ್ ಛಾಯಾ ಮೋಹನ್, ಅಂಬೇಡ್ಕರ್ ಸಮಾಜ ಪಾರ್ಟಿಯ ಸಿ.ಪಿ ಮಹಾಲಕ್ಷ್ಮಿ ಇವರು ಪ್ರಮುಖ ಪಕ್ಷಗಳ ಹುರಿಯಾಳುಗಳಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಇನ್ನುಳಿದಂತೆ ಪಕ್ಷೇತರರಾಗಿ ಕಪನಿಗೌಡ , ಟಿ.ಎನ್ ಕುಮಾರಸ್ವಾಮಿ, ಜಿ.ನಾಗೇಂದ್ರ, ಪ್ರಕಾಶ್.ಆರ್‌ಎ ಜೈನ್, ಬಿ.ಎಸ್ ಮಲ್ಲಿಕಾರ್ಜುನಯ್ಯ, ಡಿ.ಶರದಿಶಯನ, ಕೆವಿ ಶ್ರೀನಿವಾಸ್ ಕಲ್ಕೆರೆ, ಜೆ.ಕೆ ಸಮಿ, ಟಿ. ಬಿ ಸಿದ್ದರಾಮೇಗೌಡ ಕಣದಲ್ಲಿ ಸೆಣಸಲಿದ್ದಾರೆ.
ಒಟ್ಟಾರೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು, ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಿಬ್ಬಂದಿ ಸನ್ನದ್ಧರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆಗಿರುವ ರಾಕೇಶ್ ಕುಮಾರ್ ತಿಳಿಸಿದ್ದಾರೆ.