ತುಮಕೂರು: ತಮ್ಮ ತವರು ಕ್ಷೇತ್ರ ಚಿಕ್ಕನಾಯಕನಹಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶಿಶುಮರಣ ಸಂಭವಿಸುತ್ತಿರುವುದಕ್ಕೆ ಕಾನೂನು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ನಡೆದ ನಾಲ್ಕನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಕುರಿತು ಮಾತನಾಡಿದ ಅವರು, ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ 563 ಹೆರಿಗೆಯಾಗಿವೆ. ಅದರಲ್ಲಿ 52 ಶಿಶುಗಳು ಮೃತಪಟ್ಟಿವೆ. ಇದಕ್ಕೆ ಕಾರಣವೇನು ಎಂಬುದನ್ನು ತಿಳಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ನಾಗೇಂದ್ರಪ್ಪ ಅವರಿಗೆ ಸೂಚಿಸಿದರು.
ತಾಲೂಕಿನ ಜನರು ತಿಪಟೂರಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯಕೀಯ ಸಿಬ್ಬಂದಿ, ವೈದ್ಯರು ಹಾಗೂ ಸಕಲ ವ್ಯವಸ್ಥೆ ಇದ್ದರೂ ಜನರಿಗೆ ತಾಲೂಕು ಆಸ್ಪತ್ರೆ ಮೇಲೆ ನಂಬಿಕೆ ಯಾಕಿಲ್ಲ? ಇನ್ನೊಂದೆಡೆ ಶಿಶುಗಳ ಮರಣ ಪ್ರಮಾಣ ಕೂಡ ಹೆಚ್ಚಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸಿದರು.
ತಾಲೂಕು ಆಸ್ಪತ್ರೆ ಅಗತ್ಯವಿಲ್ಲ ಎಂದಾದರೆ ಯಾಕೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಪ್ರಶ್ನಿಸಿದರು. ಈವರೆಗೂ ತಾಲೂಕು ಆಸ್ಪತ್ರೆಯಲ್ಲಿ ನೋಂದಣಿಯಾಗಿರುವ 2,490 ಗರ್ಭಿಣಿಯರ ಪೈಕಿ 563 ಮಂದಿಗೆ ಹೆರಿಗೆಯಾಗಿದೆ. ಅದರಲ್ಲಿ 52 ಶಿಶುಗಳು ಮೃತಪಟ್ಟಿವೆ. ಮುಂದಿನ ಸಭೆಯಲ್ಲಿ ಇದಕ್ಕೆ ಸ್ಪಷ್ಟವಾದ ಉತ್ತರ ಕೊಡಬೇಕು ಎಂದು ಆರೋಗ್ಯ ಅಧಿಕಾರಿಗೆ ಸಚಿವ ಮಾಧುಸ್ವಾಮಿ ತಾಕೀತು ಮಾಡಿದರು.
ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತಾಲೂಕು ಆಸ್ಪತ್ರೆಗಳನ್ನು ತೆರೆಯಲಾಗಿದ್ದು, ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬಹುತೇಕರು ಜಿಲ್ಲಾಸ್ಪತ್ರೆಗೆ ಮತ್ತು ಸಮೀಪದ ತಾಲೂಕು ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾರಣಗಳು ತಿಳಿಸುವಂತೆ ಸೂಚಿಸಿದರು.
ಗುಬ್ಬಿ ತಾಲೂಕು ಆಸ್ಪತ್ರೆಯಲ್ಲಿ ದಾಖಲಾದ 3,524 ಗರ್ಭಿಣಿಯರ ಪೈಕಿ 1,061 ಮಂದಿಗೆ ಹೆರಿಗೆಯಾಗಿದೆ. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ 8,023 ಗರ್ಭಿಣಿಯರು ದಾಖಲಾಗಿದ್ದಾರೆ.