ತುಮಕೂರು: ಇದುವರೆಗೂ ವಿವಿಧ ಸಂಘ ಸಂಸ್ಥೆಗಳು ಹಾಗೂ ಐಟಿ ಬಿಟಿ ಕಂಪನಿಗಳು ಕೋವಿಡ್ ಸಂಬಂಧಿತ ವೈದ್ಯಕೀಯ ಉಪಕರಣ ನೀಡುತ್ತಿದ್ದವು. ಆದರೆ, ತುಮಕೂರು ಜಿಲ್ಲಾಸ್ಪತ್ರೆಗೆ ಇದೀಗ ವಿದೇಶಿ ವೈದ್ಯರೇ ವೈದ್ಯಕೀಯ ಉಪಕರಣಗಳನ್ನು ನೀಡುವ ಮೂಲಕ ಮೂರನೇ ಅಲೆ ಹಿಮ್ಮೆಟ್ಟಿಸಲು ಮುಂದಾಗಿದ್ದಾರೆ. ಮೂಲತಃ ತುಮಕೂರು ಜಿಲ್ಲೆಯ ವೈದ್ಯರೊಬ್ಬರು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸುಮಾರು 60ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣಗಳನ್ನು ನೀಡಿದ್ದಾರೆ.
ದೇಶ ಮತ್ತು ವಿದೇಶ ವೈದ್ಯರ ಒಕ್ಕೂಟವು, ಐಸಿಯುನಲ್ಲಿ ಬಳಸಲ್ಪಡುವ ಕೋವಿಡ್ ಸಂಬಂಧಿತ ರೋಗಿಗಳಿಗೆ ಅನೇಕ ಉಪಕರಣಗಳ ಅಗತ್ಯತೆಯನ್ನು ಮನಗಂಡು ಅದ್ರಲ್ಲೂ ಮೂರನೇ ಅಲೆಯಲ್ಲಿ ಚಿಕ್ಕಮಕ್ಕಳ ಚಿಕಿತ್ಸೆ ಅನುಗುಣವಾಗಿ ವೈದ್ಯಕೀಯ ಸೌಲಭ್ಯಗಳಿಗೆ ಪೂರಕವಾಗಿ ವೈದ್ಯಕೀಯ ಉಪಕರಣಗಳನ್ನು ನೀಡುವ ಮೂಲಕ ವೈದ್ಯ ಮುರುಳೀಧರ್ ಮತ್ತು ಸ್ನೇಹಿತರ ತಂಡ ಸದ್ದಿಲ್ಲದೇ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದೆ.
ಎರಡನೇ ಅಲೆಯಲ್ಲಿ ಅಗತ್ಯವಿರುವ ವೈದ್ಯಕೀಯ ಉಪಕರಣಗಳ ಕೊರತೆ, ಚಿಕಿತ್ಸೆಯ ಅಲಭ್ಯತೆಯನ್ನು ವಿದೇಶಿ ವೈದ್ಯರು ಸೂಕ್ಷ್ಮವಾಗಿ ಗಮನಿಸಿದ್ದಾರೆ. ವಿದೇಶದಲ್ಲಿ ಉನ್ನತ ಚಿಕಿತ್ಸೆಗೆ ಪೂರಕವಾಗಿ ಬಳಸಲ್ಪಡುತ್ತಿರೋ ಉಪಕರಣಗಳ ಕೊರತೆ ಕಂಡು ತಾವು ಹುಟ್ಟಿ ಬೆಳೆದ ಊರಿಗೆ ಕೊಡುಗೆಯಾಗಿ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗೆ ತೆರಳಿ ಉನ್ನತ ಮಟ್ಟದ ವೈದ್ಯಕೀಯ ಸೌಲಭ್ಯ ಪಡೆಯಲು ಸಾಧ್ಯವಿಲ್ಲದ ಬಡವರು ಮತ್ತು ಕಡು ಬಡವರು ಇದನ್ನು ಬಳಸಿಕೊಳ್ಳಬಹುದಾಗಿದೆ.