ತುಮಕೂರು: ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿ ಹಿನ್ನೆಲೆ ಹೆದ್ದಾರಿ ಪ್ರಾಧಿಕಾರವು ಭೂ ಸ್ವಾಧೀನ ಮಾಡಿಕೊಂಡಿರುವ ಪ್ರದೇಶದಲ್ಲಿದ್ದ ಶ್ರೀಗಂಧದ ಮರಗಳಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಪ್ರಾಧಿಕಾರದ ಯೋಜನಾ ಅನುಷ್ಠಾನ ಘಟಕದ ಎದುರು ರೈತರು ಪ್ರತಿಭಟನೆ ನಡೆಸಿದರು.
ಕಚೇರಿ ಎದುರು ಧರಣಿ ನಡೆಸಿದ ರೈತರು, ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡಿದರು. ಜೊತೆಗೆ ಸ್ಥಳದಲ್ಲೇ ಊಟ ತಯಾರಿಸಿ, ಕಚೇರಿಯೆದುರು ಮಧ್ಯಾಹ್ನದ ಊಟ ಸೇವಿಸಿದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಹೊರವಲಯದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು 22 ಜನ ರೈತರು 8 ವರ್ಷದಿಂದ ಶ್ರೀಗಂಧದ ಮರ ಬೆಳೆದಿದ್ದ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಜಾಗಕ್ಕೆ ನೋಟಿಫಿಕೇಶನ್ ಮಾಡಿ 4 ವರ್ಷಗಳಾಗಿದ್ದು, 1 ವರ್ಷದ ಹಿಂದೆ ನಮ್ಮ ಭೂಮಿಗೆ ಪರಿಹಾರ ನೀಡಿದ್ದಾರೆ. ಅದು ಕೂಡ ನಾವು ಖರೀದಿಸಿದ ಭೂಮಿಯ ಬೆಲೆಗಿಂತ ಕಡಿಮೆ ಪರಿಹಾರ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶ್ರೀಗಂಧದ ಮರಗಳಿಗೆ ದರ ನಿಗದಿ ಮಾಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಮಾವಿನ ಮರ ಹಾಗೂ ಹುಣಸೆ ಮರಕ್ಕೆ ನೀಡುವಂತಹ ಪರಿಹಾರವನ್ನು ಶ್ರೀಗಂಧದ ಮರಕ್ಕೆ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಶ್ರೀಗಂಧದ ಮರಕ್ಕೆ ಅಧಿಕ ಬೆಲೆಯಿದ್ದು, ಅದನ್ನು ನಿಗದಿಪಡಿಸುವಂತೆ ಒತ್ತಾಯಿಸಿದರು.
ಈಗಾಗಲೇ ನ್ಯಾಯಾಲಯ ಸಹ ಪರಿಹಾರ ನೀಡದೆ ಕಾಮಗಾರಿ ನಡೆಸದಂತೆ ತಡೆಯಾಜ್ಞೆ ನೀಡಿದೆ. ಹೀಗಿದ್ದರೂ ಕೂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಮಗೆ ಭೂಮಿಯನ್ನು ತೆರವುಗೊಳಿಸುವಂತೆ ನೋಟಿಸ್ ನೀಡುತ್ತಿದೆ. ನ್ಯಾಯಾಲಯದ ತೀರ್ಪಿನಂತೆ ಪ್ರಾಧಿಕಾರವು ಪರಿಹಾರ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.