ತುಮಕೂರು: ಕೃಷಿ, ಕೂಲಿಕಾರರನ್ನು ಸಾಲದಿಂದ ಮುಕ್ತಿಗೊಳಿಸಲು ಋಣ ಮುಕ್ತ ಕಾಯ್ದೆ, ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರುವುದೂ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನವರಿ 8ರಂದು ಗ್ರಾಮೀಣ ಕರ್ನಾಟಕ ಬಂದ್ ನಡೆಸಲಾಗುವುದು ಎಂದು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ರಾಜ್ಯ ಕಾರ್ಯದರ್ಶಿ ಜೆ.ಸಿ ಬಯ್ಯಾರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಎಷ್ಟೋ ಸರ್ಕಾರಗಳು ಬಂದು ಹೋಗಿವೆ. ಆದರೆ, ರೈತರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿಲ್ಲ. ಆ ಮೂಲಕ ರೈತ ಸಮುದಾಯ ಸಂಕಷ್ಟ ಅನುಭವಿಸುವಂತಾಗಿದೆ. ಕೇಂದ್ರ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯಲು ಬಂದ್ ಮಾಡಲಾಗುತ್ತದೆ ಎಂದರು.
ರೈತರು, ಕೃಷಿ ಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಗೊಳಿಸುವ ಋಣಮುಕ್ತ ಕಾಯ್ದೆ, ಡಾ.ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಜಾರಿ, ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು. ಈ ಬಂದ್ಗೆ ಎಲ್ಲಾ ರೈತ ಸಂಘಟನೆಗಳು ಬೆಂಬಲ ನೀಡಲಿವೆ ಎಂದು ತಿಳಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಸಿ.ಯತಿರಾಜು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ ಬಿಕ್ಕಟ್ಟಿನಿಂದ ರೈತರು ಅನೇಕ ಸಮಸ್ಯೆಗಳಿಂದ ನರಳುತ್ತಿದ್ದಾರೆ. ಆದರೂ, ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ. ಸಣ್ಣ ನೀರಾವರಿ ಸಚಿವರು ಇದೇ ಜಿಲ್ಲೆಯವರಾದರೂ ಹೇಮಾವತಿ ನೀರನ್ನು ಸಮರ್ಪಕವಾಗಿ ಕೆರೆಗಳಿಗೆ ತುಂಬಿಸುವ ಕೆಲಸ ಮಾಡಲಿಲ್ಲ. ಈ ಬಾರಿಯ ಮಳೆ ನೀರನ್ನು ಸಂಗ್ರಹಿಸಿದ್ದರೆ ರೈತರಿಗೆ ಹೆಚ್ಚು ಅನುಕೂಲವಾಗುತ್ತಿತ್ತು. ಈಗ ಕೆರೆಯ ನೀರು ಬತ್ತಿ ಹೋಗಿದೆ. ಇದರಿಂದ ರೈತರು ನೀರಾವರಿ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂದರು.