ತುಮಕೂರು : ಮಾರ್ಚ್ 8ರವರೆಗೂ ಜಿಪಂ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶ ಕೋರಿ ಸಿಎಂ ಬಿ ಎಸ್ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಕೋರಿಕೆ ಫಲಸಿದೆ.
ಜಿಪಂ ವ್ಯಾಪ್ತಿಯಲ್ಲಿ ಸುಮಾರು 600 ಕೋಟಿ ರೂ. ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದು, ಅನುದಾನ ವಾಪಸ್ ಸರ್ಕಾರಕ್ಕೆ ಹೋಗುತ್ತದೆ ಎಂಬ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಇತ್ತೀಚೆಗೆ ನಡೆದಿದ್ದ ಜಿಪಂ ಸಭೆಯಲ್ಲಿ ಕೆಂಡಾಮಂಡಲವಾಗಿದ್ದರು.
ಫೆಬ್ರವರಿ 18ರೊಳಗೆ ಅನುದಾನವನ್ನು ಬಳಕೆ ಮಾಡಬೇಕೆಂಬ ನಿಯಮಾವಳಿ ಹಿನ್ನೆಲೆ ಅನುದಾನ ಬಳಕೆ ಮಾಡಿಕೊಳ್ಳಲು ಸಚಿವರು ಸೂಚನೆ ನೀಡಿದ್ದರು. ಇದೀಗ ಫೆಬ್ರವರಿ 8ರೊಳಗೆ ಅನುದಾನ ಬಳಕೆ ಮಾಡಿಕೊಳ್ಳಲು ಸಾಕಷ್ಟು ತಾಂತ್ರಿಕ ತೊಂದರೆಗಳು ಎದುರಾಗಲಿದೆ ಎಂಬ ಹಿನ್ನೆಲೆ ಸರ್ಕಾರದ ನಿಯಮಾವಳಿಯನ್ನು ಸಡಿಲಿಕೆ ಮಾಡಲಾಗಿದೆ.
ಈವರೆಗೆ ಫೆಬ್ರವರಿ 15ರೊಳಗೆ ಅನುದಾನ ಮಾಡಿಕೊಳ್ಳಬೇಕೆಂಬ ನಿಯಮಾವಳಿ ಇತ್ತು. ಸದ್ಯ ಸರ್ಕಾರ ಇನ್ನು ಒಂದು ತಿಂಗಳವರೆಗೆ ಕಾಲಾವಕಾಶ ನೀಡಿದೆ. 5 ಲಕ್ಷ ರೂ. ಒಳಗಿನ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇದು ಸಹಕಾರಿಯಾಗಲಿದೆ. ಲೋಕೋಪಯೋಗಿ ಮತ್ತು ಕೆಆರ್ಡಿಎಂಎಲ್ನಲ್ಲಿ ಭರದಿಂದ ಕಾಮಗಾರಿಗಳು ಸಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಸಿಎಂ ಜೊತೆ ಮಾಧುಸ್ವಾಮಿ ಸಭೆ ಯಶಸ್ವಿ: ಕಳೆದ 10 ತಿಂಗಳಿನಿಂದ ಈ ವರ್ಷದ ಅನುದಾನದಲ್ಲಿ ಯಾವುದೇ ಕಾಮಗಾರಿಗಳು ಅನುಷ್ಠಾನಗೊಂಡಿರಲಿಲ್ಲ. ಜಿಲ್ಲೆಗೆ ಬಿಡುಗಡೆಯಾಗಿರುವ 600 ಕೋಟಿ ರೂ. ಅನುದಾನ ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದು ಯಕ್ಷಪ್ರಶ್ನೆ ಆಗಿತ್ತು.
ಹೀಗಾಗಿ, ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ 2020ರ ನವೆಂಬರ್ 20ರಂದು ವಿಶೇಷ ಸಭೆಗೆ ಆಗಮಿಸುವಂತೆ ಜಿಪಂ ಸದಸ್ಯರಿಗೆ ವೈಯಕ್ತಿಕವಾಗಿ ಕೋರಿದ್ದರು.
ಸಭೆಗೆ ಆಗಮಿಸಿದ್ದ ಜಿಪಂ ಸದಸ್ಯರು ಕ್ರಿಯಾಯೋಜನೆ ರೂಪಿಸಲು ಒಪ್ಪಿಗೆ ಸೂಚಿಸಿದ್ದರು. ಇದರಿಂದಾಗಿ ಸರ್ಕಾರಕ್ಕೆ ಅನುದಾನ ವಾಪಸ್ ಹೋಗುವುದು ತಪ್ಪಿತ್ತು. ಅಲ್ಲದೆ ತಕ್ಷಣ ಕಾಮಗಾರಿಗಳನ್ನು ಆರಂಭಿಸುವಂತೆ ಜಿಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಅಧಿಕಾರಿಗಳ ಸಭೆ ನಡೆಸಿ ಸೂಚಿಸಿದ್ದರು.
ಹೀಗಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ಅಲ್ಲದೆ ಫೆಬ್ರವರಿ 15ರೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿತ್ತು. ಅಲ್ಲದೆ ಇದು ತಾಂತ್ರಿಕವಾಗಿ ಸಾಕಷ್ಟು ಅಸಾಧ್ಯದ ಕೆಲಸ. ಇದೀಗ ಸರ್ಕಾರದ ಮಟ್ಟದಲ್ಲಿ ಸಚಿವ ಮಾಧುಸ್ವಾಮಿ ಚರ್ಚೆ ನಡೆಸಿದ್ದು, ಮಾರ್ಚ್ 8ರವರೆಗೂ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶ ನೀಡುವಂತೆ ಮಾತುಕತೆ ನಡೆಸಿದ್ದು ಫಲಪ್ರದವಾಗಿದೆ.