ತುಮಕೂರು : ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಜಿಲ್ಲೆಯ ಮುಖಂಡರಲ್ಲಿ ಒಗ್ಗಟ್ಟಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಮಾಜಿ ಸಚಿವ ಟಿ ಬಿ ಜಯಚಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ರಾಜೇಂದ್ರ ಅವರು ಗೆಲ್ಲಲಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದೆ. ಅದನ್ನು ಮತದಾರರು ಸಾಕಾರ ಮಾಡಿದ್ದಾರೆ. ಅವರನ್ನು ಅಭಿನಂದಿಸಲೇಬೇಕು ಎಂದರು.
ವಿಧಾನಪರಿಷತ್ಗೆ ಆಯ್ಕೆಯಾಗಿರುವ ಕ್ಯಾತ್ಸಂದ್ರ ರಾಜೇಂದ್ರ ಎಂಎಲ್ಸಿ ರಾಜೇಂದ್ರ ಆಗಲಿದ್ದಾರೆ. ಬಹುಶಃ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ರಾಜೇಂದ್ರ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು 6 ತಿಂಗಳ ಹಿಂದೆಯೇ ತೀರ್ಮಾನಿಸಿದ್ದೆವು.
ಅವರ ಗೆಲುವಿಗಾಗಿ ಒಟ್ಟಾಗಿ ಹೋರಾಟ ಮಾಡಬೇಕು ಎಂದು ನಿರ್ಧರಿಸಿದ್ದೆವು. ಅದರಂತೆ ಇಂದು ರಾಜೇಂದ್ರ ಅವರು ಜಯಶೀಲರಾಗಿದ್ದಾರೆ ಎಂದರು.
ನಮ್ಮೆಲ್ಲರ ಹೋರಾಟಕ್ಕೆ ಫಲ ಸಿಕ್ಕಿದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದಾಗ ರಾಜೇಂದ್ರ ಅತ್ಯಧಿಕ ಮತಗಳಿಂದ ಗೆಲ್ಲುತ್ತಾರೆ ಎಂದಾಗ, ಹೌದಾ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೂರವಾಣಿ ಮೂಲಕ ಸಂಪರ್ಕಿಸಿದಾಗಲೂ ಗೆಲ್ಲುತ್ತಾರೆ ಎಂದಿದ್ದೆ ಎಂದು ಜಯಚಂದ್ರ ಹೇಳಿದರು.