ತುಮಕೂರು: ಕೇಂದ್ರ ಸರ್ಕಾರದಿಂದ ನಿರೀಕ್ಷೆಯಂತೆ ನೆರೆ ಪರಿಹಾರ ಬಿಡುಗಡೆ ಆಗದಿದ್ದರೆ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ನಡೆಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಎಚ್ಚರಿಕೆ ನೀಡಿದರು.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹಕ್ಕೆ ಸಿಲುಕಿರುವ ಸಂತ್ರಸ್ತರು ತೀರಾ ಸಂಕಷ್ಟದಲ್ಲಿದ್ದಾರೆ. ನವೆಂಬರ್ ಒಳಗೆ ಪರಿಹಾರ ಕೊಡದೇ ಹೊದರೆ ಪ್ರತಿಭಟನೆ ಕೂರುವುದು ಖಚಿತ ಎಂದು ಹೇಳಿದರು.
ಸೋಲನ್ನು ಯಾರು ಎದುರಿಸುತ್ತಾನೋ ಅವನು ಉತ್ತಮ ರಾಜಕಾರಣಿ ಆಗುತ್ತಾನೆ. ನನ್ನ ಪಕ್ಷಕ್ಕೆ ಯುವಕರು ಹೋರಾಟ ಮಾಡುತ್ತಾರೆ. ಪಕ್ಷದ ಪ್ರತಿ ಕಾರ್ಯಕರ್ತರಿಗೆ ಸ್ಪಂದಿಸುತ್ತೇನೆ. ನಾನು 15 ಚುನಾವಣೆಗಳನ್ನು ಎದುರಿಸಿದ್ದೇನೆ. ಎಲ್ಲವೂ ಭಗವಂತನ ಆಟ. ಸತ್ಯವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಜನರ ಸಮಸ್ಯೆ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆಯುತ್ತೇನೆ. ದೇಶದಲ್ಲಿ ಗಾಂಧೀಜಿಯವರನ್ನು ಹೊರತುಪಡಿಸಿ ಇನ್ನಾರಿಗೂ ಮಹಾತ್ಮ ಎಂಬ ಪದ ಬಳಕೆ ಮಾಡಬಾರದು. ಬಿಜೆಪಿ-ಕಾಂಗ್ರೆಸ್ ಮತ್ತು ನನ್ನನ್ನು ಸೇರಿದಂತೆ ಯಾವ ಪಕ್ಷಕ್ಕೂ ಆ ಅಧಿಕಾರವಿಲ್ಲ ಎಂದರು.
ಮಾಜಿ ಸಚಿವ ಶ್ರೀನಿವಾಸ್ ಮತ್ತು ತಂಡದವರಿಗೆ ಒಂದು ವಾರ ಸಮಯಾವಕಾಶ ನೀಡುತ್ತೇನೆ. ಎಲ್ಲರೂ ಸೇರಿ ಜನರ ಬಳಿ ಹೋಗೋಣ. ಜೆಡಿಎಸ್ ನಾಶಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದರು.